ADVERTISEMENT

ತಾಯಿ ಅಗಲಿಕೆಯ ಬೆನ್ನಲ್ಲೇ ಇಹಲೋಕ ತ್ಯಜಿಸಿದ ನಟ ಇರ್ಫಾನ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2020, 19:19 IST
Last Updated 29 ಏಪ್ರಿಲ್ 2020, 19:19 IST
ನಟ ಇರ್ಫಾನ್‌ ಖಾನ್‌
ನಟ ಇರ್ಫಾನ್‌ ಖಾನ್‌   
""

ಮುಂಬೈ: ಬಾಲಿವುಡ್‌ನಟ ಇರ್ಫಾನ್‌ ಖಾನ್ (53) ಬುಧವಾರ ಮುಂಬೈನಲ್ಲಿ‌ ನಿಧನರಾದರು.

ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲಿದ್ದಇರ್ಫಾನ್ ಖಾನ್ ವಿದೇಶದಲ್ಲಿಚಿಕಿತ್ಸೆ ಪಡೆದಿದ್ದರು.

ಇರ್ಫಾನ್ ಖಾನ್ ತಾಯಿ ಶನಿವಾರ ರಾಜಸ್ಥಾನದ ಸ್ವಗೃಹದಲ್ಲಿ ಮೃತಪಟ್ಟರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಲಾಕ್‌ಡೌನ್‌ ಪರಿಣಾಮ ಅವರು ತಾಯಿಯ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ.ಮಂಗಳವಾರ ಇರ್ಫಾನ್‌ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು.

ADVERTISEMENT

ಕೋಕಿಲಾಬೆನ್‌ ಧಿರುಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದ ಇರ್ಫಾನ್‌ ಬುಧವಾರ ನಿಧನರಾದರು. ಕರುಳಿನ ಸೋಂಕಿಗೆ ಒಳಗಾಗಿದ್ದ ಅವರು ತೀವ್ರ ನಿಗಾ ಘಟಕದಲ್ಲಿದ್ದರು. ಇರ್ಫಾನ್‌ ಪತ್ನಿ ಸುತಪಾ ಸಿಕದರ್‌ ಹಾಗೂ ಪುತ್ರರಾದ ಬಬಿಲ್‌ ಮತ್ತು ಆಯಾ ಖಾನ್‌ ಆಸ್ಪತ್ರೆಯಲ್ಲೇ ಇದ್ದರು ಎಂದು ವರದಿಯಾಗಿದೆ.

2018ರಲ್ಲಿ ಅವರು ನ್ಯೂರೊಎಂಡೊಕ್ರೈನ್‌ ಟೂಮರ್‌ ಇರುವುದಾಗಿ ಬಹಿರಂಗ ಪಡಿಸಿದ್ದರು.

ವಿಶ್ವ ಮಟ್ಟದ ಸಿನಿಮಾಗಳ ಪೈಕಿ ಇರ್ಫಾನ್‌; ಸ್ಲಂಡಾಗ್‌ ಮಿಲಿಯನೇರ್‌, ದಿ ಲೈಫ್‌ ಆಫ್‌ ಪೈ, ದಿ ಮೈಟಿ ಹಾರ್ಟ್‌ ಹಾಗೂ ಜುರಾಸಿಕ್‌ ವರ್ಲ್ಡ್‌ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ.

'ನಾವು ಪುನಃ ಅವರ ಸಿನಿಮಾಗಳನ್ನು ವೀಕ್ಷಿಸುವ ಮೂಲಕ ಅವರ ಬದುಕು ಮತ್ತು ಕಾರ್ಯವನ್ನು ಸಂಭ್ರಮಿಸುತ್ತೇವೆ' ಎಂದು ಇರ್ಫಾನ್‌ ಖಾನ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ನೆಚ್ಚಿನ ನಟನ ಅಗಲಿಕೆಯ ನೋವಿನಲ್ಲಿ ಹಂಚಿಕೊಂಡಿದ್ದಾರೆ.

ಜೈಪುರ ಸಮೀಪದ ಟೋಂಗ್‌ ಗ್ರಾಮದಲ್ಲಿ ಮುಸ್ಲಿಂ ಸಮುದಾಯದಲ್ಲಿ 1967, ಜನವರಿ 7ರಂದು ಇರ್ಫಾನ್‌ ಜನಿಸಿದರು. ಪಾಲಕರ ಮೂವರು ಮಕ್ಕಳಲ್ಲಿ ಇರ್ಫಾನ್‌ ಹಿರಿಯ ಮಗ. ಅವರ ತಂದೆ ಸಾವಿನ ನಂತರದಲ್ಲಿ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಸೇರಿದರು. ಅವರ ತಾಯಿ ಸಯೀದಾ ಬೇಗಂ ಕಳೆದ ಶನಿವಾರವಷ್ಟೇ ಮೃತಪಟ್ಟರು.

ಇರ್ಫಾನ್‌ ಅವರಲ್ಲಿನ ಕ್ರಿಯಾಶೀಲನೆ, ಕಲೆಯನ್ನು ಗುರುತಿಸಿದ ಮೀರಾ ನಾಯರ್‌ ಸಲಾಂ ಬಾಂಬೆ ಚಿತ್ರಕ್ಕೆ 1988ರಲ್ಲಿ ಆಯ್ಕೆ ಮಾಡಿದರು. ಸಿನಿಮಾದ ಎಡಿಟಿಂಗ್‌ ವೇಳೆ ಅವರ ಪಾತ್ರಕ್ಕೆ ಕತ್ತರಿ ಬಿದ್ದಿತ್ತು. ನಿರ್ದೇಶಕಿ ಮೀರಾ 2006ರಲ್ಲಿ ದಿ ನೇಮ್‌ಸೇಕ್‌ ಸಿನಿಮಾದ‌ಲ್ಲಿ ಮತ್ತೆ ಇರ್ಫಾನ್‌ ಆಯ್ಕೆ ಮಾಡಿಕೊಂಡರು.

ಕೆಲವು ಸಮಯ ಟಿವಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಇರ್ಫಾನ್‌, ವೃತ್ತಿ ಜೀವನ ಸಿಲುಕಿಕೊಂಡಂತಹ ಸ್ಥಿತಿ ಅನುಭವಿಸಿದ್ದರು. ಆಸಿಫ್‌ ಕಪಾಡಿಯಾ ಅವರ 'ದಿ ವಾರಿಯರ್‌' ಸಿನಿಮಾ ಒಂದು ದೊಡ್ಡ ಬ್ರೇಕ್‌ ನೀಡಿತು. ಸುದ್ದಿಯಾಗುತ್ತಿದ್ದ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಹಾಲಿವುಡ್‌ ಸಿನಿಮಾಗಳಲ್ಲಿಯೂ ಅಭಿನಯ ಗಮನ ಸೆಳೆಯಿತು.

ಲಂಡನ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದ ಇರ್ಫಾನ್‌, 2019ರ ಫೆಬ್ರುವರಿಯಲ್ಲಿ 'ಅಂಗ್ರೇಜಿ ಮೀಡಿಯಂ' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ನಂತರ ಮತ್ತೆ ಲಂಡನ್‌ಗೆ ಚಿಕಿತ್ಸೆಗಾಗಿ ಹಿಂದುರಿದ್ದರು. ಶಸ್ತ್ರ ಚಿಕಿತ್ಸೆ ಮತ್ತು ಇತರೆ ಚಿಕಿತ್ಸೆಗಳ ಬಳಿಕೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಸ್‌ ಆದರು. ಭಾರತದಲ್ಲಿ ಲಾಕ್‌ಡೌನ್‌ ಘೋಷಣೆಯಾಗುವ ಕೆಲವೇ ದಿನಗಳ ಹಿಂದೆ ಅಂಗ್ರೇಜಿಮೀಡಿಯಂ ಚಿತ್ರ ಬಿಡುಗಡೆಯಾಗಿತ್ತು. ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಿನಿಮಾಗಳ ಪೈಕಿ ಅದೇ ಅವರ ಕೊನೆಯ ಚಿತ್ರ.

ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರ 'ಸಲಾಂ ಬಾಂಬೆ!' ಮೂಲಕ ಚಿತ್ರರಂಗ ಪ್ರವೇಶಿಸಿದ ಇರ್ಫಾನ್‌ ಖಾನ್‌ ಅಭಿನಯನವನ್ನು ನೆಚ್ಚಿಕೊಳ್ಳದ ಸಿನಿಮಾ ಪ್ರಿಯರು ಅತ್ಯಲ್ಪ. ಅವರ ಅಭಿನಯದ ಕೆಲವು ಪ್ರಮುಖ ಬಾಲಿವುಡ್‌ ಸಿನಿಮಾಗಳು ಮಕ್ಬೂಲ್‌ (2004), ಪಾನ್‌ ಸಿಂಗ್‌ ತೋಮರ್‌ (2011), ದಿ ಲಂಚ್‌ ಬಾಕ್ಸ್‌ (2013), ಹೈದರ್‌ (2014), ಗುಂಡೇ (2014), ಪಿಕು (2015), ತಲ್ವಾರ್‌ (2015) ಹಾಗೂ ಹಿಂದಿ ಮೀಡಿಯಮ್‌ (2017).


ಸಿನಿಮಾ ಪಯಣ:

* ಮೊದಲ ಸಿನಿಮಾ ಸಲಾಂ ಬಾಂಬೆ (1988); ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಿನಿಮಾ
* ಏಕ್‌ ಡಾಕ್ಟರ್‌ ಕಿ ಮೌತ್‌ (1990) ಸಿನಿಮಾದಲ್ಲಿ ಪತ್ರಕರ್ತನ ಪಾತ್ರದಲ್ಲಿ ಅಭಿನಯ; ಬೆಂಗಾಲಿ ನಿರ್ದೇಶಕ ತಪನ್‌ ಸಿನ್ಹಾ ನಿರ್ದೇಶನ
* ಹಾಸಿಲ್‌ (2003), ಮಕ್ಬೂಲ್‌ (2004): ಖಳನಟನ ಅಭಿನಯಕ್ಕೆ ಫಿಲಂ ಫೇರ್‌ ಪ್ರಶಸ್ತಿ
* ಲೈಫ್‌ ಇನ್‌ ಎ... ಮೆಟ್ರೊ (2007): ಅತ್ಯುತ್ತಮ ಪೋಷಕ ನಟ ಫಿಲಂ ಫೇರ್‌ ಪ್ರಶಸ್ತಿ
* ಪಾನ್‌ ಸಿಂಗ್‌ ತೋಮರ್‌ (2011): ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
* ದಿ ಲಂಚ್‌ಬಾಕ್ಸ್‌ (2013): ಬಾಫ್ಟಾ ಪ್ರಶಸ್ತಿ ನಾಮನಿರ್ದೇಶಿತ ಚಿತ್ರ

ಕಮರ್ಷಿಯಲ್ ಹಿಟ್‌ ಸಿನಿಮಾಗಳು:

ಹೈದರ್‌ (2014), ಗುಂಡೇ (2014), ಪಿಕು (2015) ಹಾಗೂ ತಲ್ವಾರ್‌ (2015), ಕೊನೆಯ ಚಿತ್ರ ಅಂಗ್ರೇಜಿ ಮೀಡಿಯಂ

ಅಂತರರಾಷ್ಟ್ರೀಯ ಮಟ್ಟದ ಚಿತ್ರಗಳು:

ದಿ ವಾರಿಯರ್‌ (2001), ದಿ ನೇಮ್‌ಸೇಕ್‌ (2006), ದಿ ಡಾರ್ಜಿಲಿಂಗ್‌ ಲಿಮಿಟೆಡ್‌ (2007), ಸ್ಲಂಡಾಗ್‌ ಮಿಲಿಯನೇರ್‌ (2008), ನ್ಯೂಯಾರ್ಕ್‌, ಐ ಲವ್‌ ಯು (2009), ದಿ ಅಮೇಜಿಂಗ್‌ ಸ್ಪೈಡರ್‌–ಮ್ಯಾನ್‌ (2012), ಲೈಫ್‌ ಆಫ್‌ ಪೈ (2012), ಜುರಾಸಿಕ್‌ ವರ್ಲ್ಡ್‌ (2015) ಹಾಗೂ ಇನ್ಫೆರ್ನೊ (2016).

ಆತ್ಮಬಲದಿಂದ ಹೋರಾಟ
‘ಇರ್ಫಾನ್ ಆತ್ಮಬಲದಿಂದ ಕೊನೆಯವರೆಗೂ ಹೋರಾಟ ನಡೆಸಿದರು. ಅವರ ಒಡನಾಟಕ್ಕೆ ಬಂದವರಿಗೆಲ್ಲರಿಗೂ ಅವರು ಸ್ಫೂರ್ತಿಯಾಗಿದ್ದರು. 2018ರಲ್ಲಿ ಕ್ಯಾನ್ಸರ್‌ನ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಅವರು, ಅದನ್ನು ಹಾಗೇ ಸ್ವೀಕರಿಸಿ ಅದರೊಂದಿಗೆ ಅನೇಕ ಹೋರಾಟಗಳನ್ನೇ ನಡೆಸಿದರು’ ಎಂದು ಇರ್ಫಾನ್ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

‘ನನ್ನ ಪ್ರೀತಿಯ ಇರ್ಫಾನ್, ನೀನು ಹೋರಾಡಿದೆ, ಹೋರಾಡಿದೆ ಮತ್ತು ಹೋರಾಡಿದೆ. ನಿನ್ನ ಬಗ್ಗೆ ನನಗೆ ಎಂದಿಗೂ ಹೆಮ್ಮೆ. ನಾವು ಮತ್ತೆ ಭೇಟಿಯಾಗಬಹುದೇ?... ಸಂತಾಪಗಳು... ಶುತಪಾ, ಬಾಬಿಲ್ ನೀವೂ ಈ ಹೋರಾಟದಲ್ಲಿ ಪಾಲ್ಗೊಂಡಿದ್ದೀರಿ. ಶುತಪಾ, ಈ ಹೋರಾಟಕ್ಕೆ ನಿನ್ನ ಕೈಲಿ ಸಾಧ್ಯವಾದದ್ದನ್ನೆಲ್ಲ ನೀಡಿದ್ದೀಯಾ. ಶಾಂತಿ.. ಓಂ ಶಾಂತಿ.. ಇರ್ಫಾನ್ ಖಾನ್ ಸೆಲ್ಯೂಟ್‌...’ ಎಂದು ‘ಪೀಕು’ ಚಿತ್ರದ ನಿರ್ದೇಶಕ ಶೂಜಿತ್ ಸರ್ಕಾರ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.