ಕೋಲ್ಕತ್ತ: ಬಾಲಿವುಡ್‌ನ ಹಿರಿಯ ನಟಿ ಹಾಗೂ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆಯೂ ಆಗಿರುವ ಜಯಾ ಬಚ್ಚನ್ ಅವರು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಟಿಎಂಸಿ ಪಕ್ಷವು, 'ಏಪ್ರಿಲ್ 6 ಮತ್ತು 7 ರಂದು ನಡೆಯಲಿರುವ ಕನಿಷ್ಠ ನಾಲ್ಕು ರೋಡ್ ಶೋಗಳಲ್ಲಿ ಜಯಾ ಬಚ್ಚನ್ ಅವರು ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 8ರಂದು ನಡೆಯಲಿರುವ ಸಾರ್ವಜನಿಕ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಜಯಾ ಬಚ್ಚನ್ ಅವರು ವೇದಿಕೆ ಹಂಚಿಕೊಳ್ಳುವ ಸಾಧ್ಯತೆಯೂ ಇದೆ' ಎಂದು ತಿಳಿಸಿದೆ.
ನಿನ್ನೆ (ಭಾನುವಾರ) ತಡರಾತ್ರಿ ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಬಂದಿಳಿದಿರುವ ಜಯಾ ಬಚ್ಚನ್ ಅವರನ್ನು ಟಿಎಂಸಿಯ ಹಿರಿಯ ಮುಖಂಡರು ಸ್ವಾಗತಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಗೆ ಎರಡನೇ ಹಂತದ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಮೂರನೇ ಹಂತದ ಮತದಾನ ಏಪ್ರಿಲ್ 6ರಂದು ನಡೆಯಲಿದೆ.
ಜಯಾ ಬಚ್ಚನ್ (ಜನನ ಏ.9, 1948) ಬಾಲ್ಯದಲ್ಲೇ ಸಿನಿಮಾ ಸೆಳೆತಕ್ಕೆ ಒಳಗಾದವರು. ಸತ್ಯಜಿತ್ ರೇ ನಿರ್ದೇಶನದ ‘ಮಹಾನಗರ್' ಎಂಬ ಬಂಗಾಳಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು.
ಒಂಬತ್ತು ಬಾರಿ ಫಿಲಂಫೇರ್ ಪ್ರಶಸ್ತಿಗಳನ್ನು ಗಳಿಸಿರುವ ಜಯಾ ಬಚ್ಚನ್, ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ. ಈಗ ಅವರು ಸಮಾಜವಾದಿ ಪಕ್ಷದಿಂದ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.