ADVERTISEMENT

'ದಿ ಕಾಶ್ಮೀರ್‌ ಫೈಲ್ಸ್‌' ನೋಡಿ ಬರುವಾಗ ಕಾರಿನ ಮೇಲೆ ಬಾಂಬ್ ದಾಳಿ: ಬಿಜೆಪಿ ಸಂಸದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2022, 2:48 IST
Last Updated 20 ಮಾರ್ಚ್ 2022, 2:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನದಿಯಾ: 'ದಿ ಕಾಶ್ಮೀರ್‌ ಫೈಲ್ಸ್‌' ಸಿನಿಮಾ ವೀಕ್ಷಿಸಿ ಹಿಂದಿರುಗುವಾಗ ಕಾರಿನ ಮೇಲೆ ಬಾಂಬ್‌ ದಾಳಿ ನಡೆದಿರುವುದಾಗಿ ಬಿಜೆಪಿಯ ಸಂಸದರೊಬ್ಬರು ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ಶನಿವಾರ ಈ ಘಟನೆ ನಡೆದಿರುವುದಾಗಿ ಸಂಸದ ಜಗನ್ನಾಥ್‌ ಸರ್ಕಾರ್‌ ಹೇಳಿದ್ದಾರೆ.

'ನಾನು ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಿ ವಾಪಸ್‌ ಆಗುತ್ತಿದ್ದೆ. ನನ್ನ ಕಾರಿನ ಮೇಲೆ ಬಾಂಬ್‌ ಎಸೆಯಲಾಯಿತು, ಅದರಿಂದ ಸ್ವಲ್ಪದರಲ್ಲಿಯೇ ಬಚಾವಾದೆವು...ಕಾರನ್ನು ಸ್ವಲ್ಪ ದೂರದವರೆಗೂ ಚಲಾಯಿಸಿದೆವು....10 ನಿಮಿಷಗಳ ಬಳಿಕ ಪೊಲೀಸರು ಬಂದರು' ಎಂದು ಜಗನ್ನಾಥ್‌ ಸರ್ಕಾರ್‌ ಅವರು ಘಟನೆಯನ್ನು ವಿವರಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.

ಮಮತಾ ಬ್ಯಾನರ್ಜಿ ಅವರ ನೇತೃತ್ವದ ಸರ್ಕಾರದಿಂದ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

'ರಾಜ್ಯ ಸರ್ಕಾರದಿಂದ ಪ್ರಜಾಪ್ರಭುತ್ವವು ತಲೆ ಕೆಳಗಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದರಿಂದ ಬಂಗಾಳದಲ್ಲಿ ಯಾರೊಬ್ಬರಿಗೂ ರಕ್ಷಣೆ ಇಲ್ಲದಂತಾಗಿದೆ. ಸಂವಿಧಾನದ 356ನೇ ವಿಧಿಯನ್ನು (ರಾಷ್ಟ್ರಪತಿ ಆಡಳಿತ) ಹೇರುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಬೇಕು' ಎಂದು ಬಿಜೆಪಿ ಸಂಸದ ಜಗನ್ನಾಥ್‌ ಆಗ್ರಹಿಸಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ಕಾಶ್ಮೀರಿ ಪಂಡಿತರ ಹತ್ಯೆಯ ವಿಚಾರವನ್ನು ಹೊಂದಿದ್ದು, ಕೆಲವರು ಸತ್ಯ ಈಗ ಹೊರ ಬಂದಿದೆ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಇದು ಹಿಂದೂ–ಮುಸ್ಲಿಂ ನಡುವೆ ದ್ವೇಷ ಹುಟ್ಟುಹಾಕುವ ಯತ್ನ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.