ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದ 10 ಪ್ರತಿಷ್ಠಿತ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಮತ್ತು ಆಕಾಸಾ ಏರ್‌ನ 15 ವಿಮಾನಗಳಿಗೆ ಭದ್ರತಾ ಬೆದರಿಕೆ ಬಂದಿದೆ ಎಂದು ವರದಿಯಾಗಿವೆ.
ಲಖನೌ ಹೋಟೆಲ್‌ಗಳಿಗೆ ಬೆದರಿಕೆ ಹಾಕಿರುವ ದುಷ್ಕರ್ಮಿಗಳು ₹46 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ವಿಫಲವಾದರೆ ಸ್ಫೋಟ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆ.
‘ನಿಮ್ಮ ಹೋಟೆಲ್‌ನ ನೆಲಮಾಳಿಗೆಯಲ್ಲಿ ಕಪ್ಪು ಚೀಲದಲ್ಲಿ ಬಾಂಬ್‌ಗಳನ್ನು ಇಟ್ಟಿದ್ದೇವೆ. ನನಗೆ 55 ಸಾವಿರ ಡಾಲರ್ ಹಣಕೊಡಬೇಕು. ಇಲ್ಲವೇ ಬಾಂಬ್ ಸ್ಫೋಟಿಸಿ ಎಲ್ಲೆಡೆ ರಕ್ತ ಚೆಲ್ಲುತ್ತೇನೆ. ಬಾಂಬ್ ನಿಷ್ಕ್ರಿಯಕ್ಕೆ ಯತ್ನಿಸಿದರೂ ಸ್ಫೋಟಿಸುತ್ತೇನೆ’ಎಂದು ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ಕೂಡಲೇ ಪೊಲೀಸರಿಗೆ ಹೋಟೆಲ್‌ಗಳ ಆಡಳಿತ ಮಂಡಳಿಗಳು ದೂರು ನೀಡಿದ್ದು, ಕ್ಷಿಪ್ರ ತನಿಖೆ ನಡೆಯುತ್ತಿದೆ.
ತಿರುಪತಿಯ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಬಂದ ಎರಡು ದಿನಗಳ ಬಳಿಕ ಲಖನೌ ಹೋಟೆಲ್‌ಗಳಿಗೆ ಬೆದರಿಕೆ ಒಡ್ಡಲಾಗಿದೆ.
ಕಳೆದ ತಿಂಗಳು, ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ಗೂ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ, ಅದೊಂದು ಹುಸಿ ಕರೆ ಎಂದು ಸಾಬೀತಾಗಿತ್ತು.
ಆಕಾಸಾ ಏರ್‌ನ 15 ವಿಮಾನಗಳಿಗೆ ಭದ್ರತಾ ಎಚ್ಚರಿಕೆ
ಭಾನುವಾರ ಕಾರ್ಯಾಚರಣೆಗೆ ಸಿದ್ಧವಾಗಿದ್ದ ಆಕಾಸಾ ಏರ್‌ನ 15 ವಿಮಾನಗಳಿಗೆ ಭದ್ರತಾ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನಗಳ ತುರ್ತು ನಿರ್ವಹಣಾ ತಂಡ ಜಾಗೃತವಾಗಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.
‘ವಿಮಾನಗಳ ಕ್ಯಾಪ್ಟನ್ ಮತ್ತು ಸಿಬ್ಬಂದಿ ಸ್ಥಳೀಯ ಅಧಿಕಾರಿಗಳ ಜೊತೆಗಿನ ಸಮನ್ವಯದಲ್ಲಿ ಅಗತ್ಯವಿದ್ದ ತುರ್ತು ನಿಯಮಗಳು, ಭದ್ರತೆ ಕುರಿತಾದ ಶಿಷ್ಟಾಚಾರಗಳನ್ನು ಅನುಸರಿಸಿದ್ದಾರೆ’ಎಂದೂ ಅವರು ಹೇಳಿದ್ದಾರೆ.
ಭದ್ರತಾ ಎಚ್ಚರಿಕೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲ ವಿಮಾನನಿಲ್ದಾಣಗಳಲ್ಲಿಯೂ ಸ್ಥಳೀಯ ಅಧಿಕಾರಿಗಳ ಸಮನ್ವಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸುವ, ಅವರಿಗೆ ಸೂಕ್ತ ನೆರವು, ಅಗತ್ಯ ಊಟೋಪಚಾರಗಳ ಸೌಲಭ್ಯ ಒದಗಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಕಳೆದ 13 ದಿನಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಿಸುವ 300ಕ್ಕೂ ಅಧಿಕ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.