ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪಕ್ಕೆ ಸಂಬಂಧಿಸಿದಂತೆ 15 ದಿನಗಳಲ್ಲಿ ಪ್ರಾಥಮಿಕ ತನಿಖೆ ಪೂರ್ಣಗೊಳಿಸುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಗಿರೀಶ್ ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ‘ಇದು ಸ್ವತಂತ್ರ ವಿಚಾರಣೆಗೆ ಅಗತ್ಯವಾದ ಅಸಾಧಾರಣ ಮತ್ತು ವಿಶಿಷ್ಟ ಪ್ರಕರಣವಾಗಿದೆ‘ ಎಂದು ಅಭಿಪ್ರಾಯಪಟ್ಟಿದೆ.
ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸಿ, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ನ್ಯಾಯಪೀಠ ಸಿಬಿಐ ನಿರ್ದೇಶಕರಿಗೆ ನಿರ್ದೇಶನ ನೀಡಿತು.
ಪರಮ್ ಬೀರ್ ಸಿಂಗ್ ಸಲ್ಲಿಸಿದ ಅರ್ಜಿಯೂ ಸೇರಿದಂತೆ, ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಪೀಠ ವಿಲೇವಾರಿ ಮಾಡಿತು. ಇದರಲ್ಲಿ ನಗರದ ವಕೀಲೆ ಜಯಶ್ರೀ ಪಾಟೀಲ್ ಮತ್ತು ಶಿಕ್ಷಕ ಮೋಹನ್ ಭಿಡೆ ಅವರು ವಿವಿಧ ಪರಿಹಾರಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು.
ಸಚಿವ ದೇಶಮುಖ್ ಅವರು ಮುಂಬೈನಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳು ₹ 100 ಕೋಟಿ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಈ ಕುರಿತು ಮಾ. 25ರಂದು ನ್ಯಾಯಾಲಯಕ್ಕೆ ಕ್ರಿಮಿನಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.