ADVERTISEMENT

ವಸ್ತ್ರಸಂಹಿತೆ: ವಿದ್ಯಾರ್ಥಿನಿಯರ ಅರ್ಜಿ ವಜಾ

ಪಿಟಿಐ
Published 26 ಜೂನ್ 2024, 15:39 IST
Last Updated 26 ಜೂನ್ 2024, 15:39 IST
   

ಮುಂಬೈ: ಹಿಜಾಬ್, ನಿಕಾಬ್, ಬುರ್ಖಾ, ಟೋಪಿ ಮತ್ತು ಸ್ಟೋಲ್ ಧರಿಸಲು ಮುಂಬೈನ ಕಾಲೇಜೊಂದು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್ ಮತ್ತು ರಾಜೀಶ್ ಪಾಟೀಲ್ ಅವರು ಇದ್ದ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ಕಾಲೇಜು ಆಡಳಿತ ಮಂಡಳಿಯ ತೀರ್ಮಾನದಲ್ಲಿ ತಾನು ಮಧ್ಯಪ್ರವೇಶಿಸಬೇಕಾದ ಅಗತ್ಯ ಇಲ್ಲ ಎಂದು ಹೇಳಿದೆ. ಹೈಕೋರ್ಟ್‌ನ ಈ ತೀರ್ಮಾನವನ್ನು ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. 

ಚೆಂಬೂರ್ ಟ್ರಾಂಬೆ ಎಜುಕೇಷನ್ ಸೊಸೈಟಿಯ ಎನ್.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಈ ಅರ್ಜಿ ಸಲ್ಲಿಸಿದ್ದರು. ‘ಕಾಲೇಜಿನ ಆಡಳಿತ ಮಂಡಳಿ ಕೈಗೊಂಡ ತೀರ್ಮಾನವು ಕಾನೂನಿಗೆ ಅನುಗುಣವಾಗಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ADVERTISEMENT

ಕಾಲೇಜಿನಲ್ಲಿ ವಿಧಿಸಿರುವ ವಸ್ತ್ರ ಸಂಹಿತೆಯು ತಮ್ಮ ಖಾಸಗಿತನದ ಹಕ್ಕು, ಘನತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿದೆ ಎಂದು ವಿದ್ಯಾರ್ಥಿನಿಯರು ಹೇಳಿದ್ದರು.

‘ನಾವು ನಮ್ಮ ನಿಲುವಿಗೆ ಅಂಟಿಕೊಂಡಿರುತ್ತೇವೆ. ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ವಿದ್ಯಾರ್ಥಿನಿಯರ ಪರ ವಕೀಲ ಅಲ್ತಾಫ್ ಖಾನ್ ಹೇಳಿದ್ದಾರೆ.

ವಸ್ತ್ರ ಸಂಹಿತೆಯು ಎಲ್ಲ‌ರಿಗೂ ಸಮಾನವಾಗಿ ಅನ್ವಯವಾಗುತ್ತದೆ; ಅದು ಮುಸ್ಲಿಮರಿಗೆ ಮಾತ್ರ ಸೀಮಿತವಾಗಿರುವಂಥದ್ದಲ್ಲ ಎಂದು ಕಾಲೇಜಿನ ವಕೀಲರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.