ಮುಜಫ್ಫರಪುರ, ಬಿಹಾರ: ಅಲೋಪಥಿ ವೈದ್ಯಪದ್ಧತಿ ಹಾಗೂ ವೈದ್ಯರ ಕುರಿತು ಅವಮಾನಕರ ಹೇಳಿಕೆಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿ ಇಲ್ಲಿನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಜ್ಞಾನಪ್ರಕಾಶ್ ಎಂಬುವವರು ತಮ್ಮ ವಕೀಲ ಸುಧೀರ್‌ಕುಮಾರ್ ಓಝಾ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ. ಹಂಗಾಮಿ ನ್ಯಾಯಾಧೀಶ ಶೈಲೇಂದ್ರ ರಾಯ್ ಅವರಿಗೆ ಈ ಅರ್ಜಿ ಸಲ್ಲಿಸಲಾಗಿದೆ.
‘ಯೋಗ ಗುರು ಬಾಬಾ ರಾಮ್‌ದೇವ್ ಅವರು ತಮ್ಮ ಹೇಳಿಕೆಗಳ ಮೂಲಕ ದ್ರೋಹ ಎಸಗಿದ್ದಾರೆ. ಹೀಗಾಗಿ ವಂಚನೆ, ದೇಶದ್ರೋಹಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳಡಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ಜೂನ್ 7ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.
ವಿವಿಧ ವಿಷಯಗಳಿಗೆ ಸಂಬಂಧಿಸಿ ಕೋರ್ಟ್‌ಗೆ ಪದೇಪದೇ ಅರ್ಜಿ ಸಲ್ಲಿಸುವ ಕಾರಣ ಜ್ಞಾನಪ್ರಕಾಶ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಅನೇಕ ಹಿರಿಯ ರಾಜಕಾರಣಿಗಳು, ಬಾಲಿವುಡ್ ನಟ–ನಟಿಯರು ಹಾಗೂ ಹಲವು ವಿದೇಶಿಯರ ವಿರುದ್ಧವೂ ಇವರು ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.