ADVERTISEMENT

ಶಿವಾಜಿ ಜೊತೆ ಮೋದಿ ಹೋಲಿಕೆ: ವಿವಾದಿತ ಪುಸ್ತಕ ನಿಷೇಧಕ್ಕೆ ಶಿವಸೇನಾ ಆಗ್ರಹ

ಮಹಾರಾಷ್ಟ್ರದಲ್ಲಿ ವಿವಾದದ ಕಿಡಿ ಹೊತ್ತಿಸಿದ ‘ಆಜ್‌ ಕೆ ಶಿವಾಜಿ: ನರೇಂದ್ರ ಮೋದಿ’ ಕೃತಿ

ಪಿಟಿಐ
Published 13 ಜನವರಿ 2020, 13:31 IST
Last Updated 13 ಜನವರಿ 2020, 13:31 IST
ಶಿವಾಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಶಿವಾಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ   

ಮುಂಬೈ:ಬಿಜೆಪಿ ಮುಖಂಡ ಜೈ ಭಗವಾನ್ ಗೋಯೆಲ್ ಬರೆದಿರುವ ‘ಆಜ್ ಕೆ ಶಿವಾಜಿ: ನರೇಂದ್ರ ಮೋದಿ’ ಕೃತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರೊಂದಿಗೆ ಮೋದಿ ಅವರನ್ನು ಹೋಲಿಸಿರುವುದು ಅವಮಾನಕರ ಎಂದಿರುವ ಶಿವಸೇನಾದ ಮುಖಂಡ ಸಂಜಯ್ ರಾವುತ್, ಕೃತಿಯನ್ನು ನಿಷೇಧಿಸಬೇಕು ಹಾಗೂ ಈ ಸಂಬಂಧ ಶಿವಾಜಿ ಅವರ ರಾಜವಶಂಸ್ಥರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಶಿವಾಜಿ ಮಹಾರಾಜ ಅವರೊಂದಿಗೆ ಯಾರನ್ನೂ ಹೋಲಿಸುವುದು ಸರಿಯಲ್ಲ. ಮೋದಿ ಅವರ ಮುಖಸ್ತುತಿ ಮಾಡಲು ಕೆಲ ಗುಲಾಮರ ಕರಕುಶಲ ಕೆಲಸವಿದು. ಈ ಕೃತಿಯೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲವೆಂದು ಬಿಜೆಪಿ ಘೋಷಿಸಬೇಕು. ಶಿವಾಜಿ ಮಹಾರಾಜ ಅವರಿಗಿಂತ ಪ್ರಧಾನಿ ಮೋದಿ ದೊಡ್ಡವರೇ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಲಿ’ ಎಂದು ಸವಾಲುಎಸೆದಿದ್ದಾರೆ.

ಪ್ರಧಾನಿ ಮೋದಿ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಶಿವಾಜಿ ಮಹಾರಾಜ ಅವರೊಂದಿಗೆ ಯಾರನ್ನೂ ಹೋಲಿಸುವುದು ಸರಿಯಲ್ಲ ಎಂದ ಅವರು, ‘ಶಿವಾಜಿವಂಶಸ್ಥರಾಗಿರುವಬಿಜೆಪಿ ರಾಜ್ಯಸಭಾ ಸದಸ್ಯ ಛತ್ರಪತಿ ಸಾಂಭಾಜಿ ರಾಜೇ ಮತ್ತು ಸತಾರಾ ಮಾಜಿ ಸಂಸದ ಉದ್ಯಾನ್‌ರಾಜೇ ಭೋಂಸ್ಲೆ ಈ ಪುಸ್ತಕದ ಬಗ್ಗೆ ತಮ್ಮ ನಿಲುವನ್ನುಸ್ಪಷ್ಡಪಡಿಸಬೇಕು. ಕೃತಿಯಲ್ಲಿರುವ ಅಂಶಗಳ ಕಾರಣಕ್ಕಾಗಿ ರಾಜ ವಂಶಸ್ಥರು ಬಿಜೆಪಿ ಬಿಟ್ಟು ಹೊರಬರಬೇಕು’ಎಂದು ಒತ್ತಾಯಿಸಿದರು.

ADVERTISEMENT

‘ಕೃತಿನಿಷೇಧಿಸುವಕುರಿತುಮಹಾರಾಷ್ಟ್ರಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ್ದೇನೆ. ಈ ನಿಟ್ಟಿನಲ್ಲಿ ಶಿವಸೇನಾ ಸರಿಯಾದ ನಿರ್ಧಾರತೆಗೆದುಕೊಳ್ಳಲಿದೆ.ಬಿಜೆಪಿಯುಕೃತಿ ಮತ್ತು ಲೇಖಕರೊಂದಿಗೆ ಅಂತರ ಕಾಪಾಡಿಕೊಳ್ಳಬೇಕು ಎಂಬುದಾಗಿಠಾಕ್ರೆ ಪ್ರತಿಕ್ರಿಯಿಸಿದ್ದಾರೆ’ ಎಂದುರಾವುತ್ ಹೇಳಿದ್ದಾರೆ.

ದೂರು ದಾಖಲು

ಶಿವಾಜಿ ಮಹಾರಾಜ ಅವರೊಂದಿಗೆ ಮೋದಿಯನ್ನು ಹೋಲಿಸಿರುವುದು ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಢೆ ಭಾನುವಾರ ನಾಗ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕೃತಿ ಬಿಜೆಪಿ ಪಕ್ಷದ ದೆಹಲಿಯ ಕಚೇರಿಯಲ್ಲಿ ಮುದ್ರಣವಾಗಿದೆ.ಕೃತಿ ಮತ್ತು ಮುದ್ರಣಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಅವರು ಆಗ್ರಹಿಸಿದ್ದಾರೆ.

ಪುಣೆಯಲ್ಲಿ ಪ್ರತಿಭಟನೆ

ಪ್ರಧಾನಿ ಮೋದಿ ಅವರನ್ನು ಶಿವಾಜಿ ಮಹಾರಾಜ ಅವರೊಂದಿಗೆ ಹೋಲಿಸಿರುವುದನ್ನು ಖಂಡಿಸಿ ಎನ್‌ಸಿಪಿ ಮತ್ತು ಸಾಂಭಾಜಿ ಬ್ರಿಗೇಡ್ ಸಂಘಟನೆ ಪುಣೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.

ಎನ್‌ಸಿಪಿ ನಾಯಕ ಪ್ರಶಾಂತ್ ಜಗ್‌ತಾಪ್ ಮಾತನಾಡಿ, ‘ಈ ರೀತಿಯ ಹೋಲಿಕೆ ಭವ್ಯ ಇತಿಹಾಸಕ್ಕೆ ಮಸಿ ಮಳಿಯುವಂಥದ್ದು’ ಎಂದರು.

ಸಾಂಭಾಜಿ ಬ್ರಿಗೇಡ್ ಸಂಘಟನೆ ಮುಖ್ಯಸ್ಥ ಸಂತೋಷ್ ಶಿಧೆ ಮಾತನಾಡಿ, ‘48 ಗಂಟೆಗೊಳಗೆ ಕೃತಿಯನ್ನು ನಿಷೇಧಿಸಬೇಕು. ಇಂದು ಶಿವಾಜಿ ಜೊತೆ ಹೋಲಿಕೆ, ಮುಂದಿನ ದಿನಗಳಲ್ಲಿ ರಾಣಾ ಪ್ರತಾಪನೊಂದಿಗೆ ಹೋಲಿಕೆ ಮಾಡುವ ಮೂಲಕ ಐತಿಹಾಸಿಕ ವ್ಯಕ್ತಿತ್ವಗಳನ್ನು ಅಳಿಸಿಹಾಕುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮಾಡುತ್ತಿವೆ’ ಎಂದು ಆರೋಪಿಸಿದ್ದಾರೆ.

ಕೃತಿಯಿಂದ ಅಂತರ ಕಾಪಾಡಿಕೊಂಡ ಬಿಜೆಪಿ

ವಿವಾದಿತ ಕೃತಿಯಿಂದ ಟೀಕೆಗಳ ಸುರಿಮಳೆ ಎದುರಿಸುತ್ತಿರುವ ಬಿಜೆಪಿ, ‘ಪಕ್ಷಕ್ಕೂ ಕೃತಿಗೂ ಸಂಬಂಧವಿಲ್ಲ. ಇದರಿಂದ ಅಂತರ ಕಾಪಾಡಿಕೊಂಡಿರುವುದಾಗಿ’ ಹೇಳಿದೆ.

‘ಕೃತಿಯ ಪ್ರಕಟಣೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ರೀತಿಯ ಹೋಲಿಕೆ ಕೃತಿಕಾರರನ ವೈಯಕ್ತಿಕ ಅಭಿಪ್ರಾಯ. ಅದಕ್ಕೂ ಪಕ್ಷಕ್ಕೂ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ’ ಎಂದು ಬಿಜೆಪಿಯ ಮಾಧ್ಯಮ ಘಟಕದ ಸಹ ಉಸ್ತುವಾರಿ ಸಂಜಯ್ ಮಯುಖ್ ಸ್ಪಷ್ಟಪಡಿಸಿದ್ದಾರೆ.‌

ಕೃತಿ ಪರಿಷ್ಕರಣೆಗೆ ಸಿದ್ಧ

‘ಶಿವಾಜಿ ಅವರಂತೆ ಮೋದಿ ಅವರು ಎಲ್ಲರನ್ನೂ ಹೇಗೆ ಒಂದುಗೂಡಿಸಿ ಜೊತೆಗೆ ಕೊಂಡೊಯ್ದರು ಎಂಬುದನ್ನು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು. ಇದು ಜನರ ಭಾವನೆಗಳಿಗೆ ಘಾಸಿಗೊಳಿಸಿದೆ ಎಂದಾದಲ್ಲಿ ನಾನು ಆ ಭಾಗಗಳನ್ನು ಪರಿಷ್ಕರಿಸಲು ಸಿದ್ಧವಿರುವುದಾಗಿ’ ಬಿಜೆಪಿಯ ಸದಸ್ಯರೂ ಆಗಿರುವ ಕೃತಿಯ ಲೇಖಕ ಜೈ ಭಗವಾನ್ ಗೋಯೆಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶಿವಾಜಿ ವಂಶಸ್ಥರ ಅಭಿಪ್ರಾಯ

ಶಿವಾಜಿ ಮಹಾರಾಜರ ವಂಶಸ್ಥ ಹಾಗೂ ಬಿಜೆಪಿಯ ಶಾಸಕ ಶಿವೇಂದ್ರರಾಜೇ ಭೋಂಸ್ಲೆ, ‘ಲೇಖಕರುಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ’ ಎಂದು ದೂರಿದ್ದಾರೆ.

‘ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಯಾವ ಮಟ್ಟಕ್ಕೂ ಇಳಿಯುವಂಥ ಇಂಥ ಗುಲಾಮರ ಬಗ್ಗೆ ಕಣ್ಣಿಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡುತ್ತೇನೆ. ಶಿವಾಜಿ ಅವರೊಂದಿಗೆ ಮೋದಿ ಅವರನ್ನು ಹೋಲಿಸಿರುವುದಕ್ಕೆ ನನ್ನ ವಿರೋಧವಿದೆ' ಎಂದುಶಿವೇಂದ್ರ ಹೇಳಿದ್ದಾರೆ.

ಶಿವಾಜಿ ವಂಶಸ್ಥರಾದ ಸಾಂಭಾಜಿ ರಾಜೇ ಅವರು ಪುಸ್ತಕವನ್ನು ತಕ್ಷಣವೇ ನಿಷೇಧಿಸಬೇಕು ಎಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.