ADVERTISEMENT

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ: ಶಿವಸೇನಾ

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಆಗ್ರಹ

ಪಿಟಿಐ
Published 16 ಮಾರ್ಚ್ 2021, 7:15 IST
Last Updated 16 ಮಾರ್ಚ್ 2021, 7:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರ ಮೇಲೆ ಕನ್ನಡಪರ ಸಂಘಟನೆಗಳಿಂದ ದೌರ್ಜನ್ಯ ನಿಲ್ಲುತಿಲ್ಲ. ಹೀಗಾಗಿ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಶಿವಸೇನಾ ಮಂಗಳವಾರ ಹೇಳಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.

ಬೆಳಗಾವಿಯಲ್ಲಿ ಮರಾಠಿ ಮಾತನಾಡುವವರ ಮೇಲೆ ಕನ್ನಡಪರ ಸಂಘಟನೆ ಕಾರ್ಯಕರ್ತರುಇತ್ತೀಚೆಗೆ ಹಲ್ಲೆ ಮಾಡಿದ್ದಾರೆ. ಅಂಗಡಿಗಳಿಗೆ ಅಳವಡಿಸಲಾಗಿದ್ದ ಮರಾಠಿ ಫಲಕಗಳನ್ನು ಕಿತ್ತೆಸೆಯಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿರುವ ಮರಾಠಿಪರ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ADVERTISEMENT

ಕರ್ನಾಟಕ ಪೊಲೀಸರು ಸಹ ಮರಾಠಿ ಭಾಷಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಸ್ಥಳೀಯರಿಂದಲೂ ದೌರ್ಜನ್ಯ ಮುಂದುವರಿದಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಇಂಥ ದುಷ್ಕೃತ್ಯಗಳನ್ನು ಬೆಂಬಲಿಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಶಿವಸೇನಾ ಆರೋಪಿಸಿದೆ.

‘ಮಹಾರಾಷ್ಟ್ರದಲ್ಲಿ ವಿವಿಧ ಭಾಷೆ ಮಾತನಾಡುವವರು ಅನೇಕ ದಶಕಗಳಿಂದ ವಾಸಿಸುತ್ತಿದ್ದಾರೆ. ಆದರೆ, ಪರಭಾಷಿಕರೊಂದಿಗೆ ಮರಾಠಿಗರು ಎಂದಿಗೂ ಕೆಟ್ಟದಾಗಿ ನಡೆದುಕೊಂಡಿಲ್ಲ. ಇಂದೋರ್‌, ವಡೋದರಾ ನಗರಗಳಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಮರಾಠಿಗರು ಇದ್ದಾರೆ. ಆದರೆ, ಅವರು ಎಂದಿಗೂ ಸ್ಥಳೀಯರೊಂದಿಗೆ ಸಂಘರ್ಷ ಎದುರಿಸಿಲ್ಲ’ ಎಂದೂ ಸಂಪಾದಕೀಯದಲ್ಲಿ ವಿವರಿಸಲಾಗಿದೆ.

‘ಈ ವಿಷಯ ಕುರಿತು ಕರ್ನಾಟಕದ ಮುಖ್ಯಮಂತ್ರಿ, ಕೇಂದ್ರದ ಸಚಿವರೊಂದಿಗೆ ಚರ್ಚಿಸಬೇಕು’ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಅವರಿಗೆ ಮನವಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.