ನವದೆಹಲಿ: ಈಶಾನ್ಯ ದೆಹಲಿಯ ದೈಲಾಪುರದ ಮದರಸಾವೊಂದರಲ್ಲಿ ಕಲಿಯುತ್ತಿರುವ 5 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ವಿದ್ಯಾರ್ಥಿಯ ಕುತ್ತಿಗೆ, ಹೊಟ್ಟೆ ಮತ್ತು ತೊಡೆಸಂದುಗಳಲ್ಲಿ ಗುಳ್ಳೆಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
‘ಬ್ರಿಜ್‌ಪುರಿ ಮದರಸಾದಲ್ಲಿ ವಿದ್ಯಾರ್ಥಿ ಸಾವಿಗೀಡಾಗಿರುವ ಬಗ್ಗೆ ಶುಕ್ರವಾರ ರಾತ್ರಿ 9.52ಕ್ಕೆ ಕರೆ ಬಂದಿತ್ತು. ಮಗನಿಗೆ ಅನಾರೋಗ್ಯ ಎಂದು ಶುಕ್ರವಾರ ಸಂಜೆ 6.30ಕ್ಕೆ ತಾಯಿಗೆ ತಿಳಿಸಲಾಗಿತ್ತು. ತಾಯಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ, ದಾರಿ ಮಧ್ಯೆ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಗನ ಶವದೊಂದಿಗೆ ಮದರಸಾಗೆ ತಾಯಿ ಮರಳಿದ್ದಾಳೆ. ಈ ವೇಳೆ ಅಲ್ಲಿ ಜನ ಜಮಾಯಿಸಿದ್ದು, ಮೃತದೇಹವನ್ನು ರಸ್ತೆಯಲ್ಲೇ ಇಟ್ಟು ಮದರಸಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ಜಿಟಿಬಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಪೊಲೀಸರು ಭವರಸೆ ನೀಡಿದ ಬಳಿಕ ಗುಂಪು ಚದುರಿದೆ.
ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಮನೆ ಸಹಾಯಕಿಯಾಗಿರುವ ತಾಯಿ, ತನ್ನ ಮಗ ಕಳೆದ ಐದು ತಿಂಗಳಿಂದ ಮದರಸಾದಲ್ಲಿ ಓದುತ್ತಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಬಾಲಕನ ತಂದೆ ಉತ್ತರ ಪ್ರದೇಶದಲ್ಲಿ ನೆಲೆಸಿದ್ದು, ತಿಂಗಳಿಗೊಮ್ಮೆ ದೆಹಲಿಗೆ ಬರುತ್ತಾರೆ. ದಂಪತಿಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ, 10 ವರ್ಷದ ಹುಡುಗ ಮತ್ತು ಎಂಟು ವರ್ಷದ ಹುಡುಗಿ, ಅವರು ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.
ದೇಹದದಲ್ಲಿ ದೊಡ್ಡ ಪ್ರಮಾಣದ ಗಾಯಗಳು, ಕುತ್ತಿಗೆ, ಹೊಟ್ಟೆ ಮತ್ತು ತೊಡೆಸಂದುಗಳಲ್ಲಿ ಗುಳ್ಳೆಗಳು ಪ್ರಾಥಮಿಕ ಪರೀಕ್ಷೆಯಲ್ಲಿ ಕಂಡುಬಂದಿವೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾಜಿ ದಿನ್ ಮೊಹಮ್ಮದ್ ಎಂಬವರು ಮದರಸಾ ಪ್ರಾಂಶುಪಾಲರಾಗಿದ್ದು, ಸುಮಾರು 250 ಹುಡುಗರು ಕಲಿಯುತ್ತಾರೆ. ಇವರಲ್ಲಿ 150 ಮಂದಿ ದೆಹಲಿಯ ಹೊರಗಿನವರು, ಹೆಚ್ಚಿನವರು ಉತ್ತರ ಪ್ರದೇಶದವರು ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.