ಛತ್ತರ್‌ಪುರ: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ 17 ವರ್ಷದ ಬಾಲಕನಿಂದ ಬಲವಂತವಾಗಿ ಶೂ ನೆಕ್ಕಿಸಿರುವುದು ಮತ್ತು ಆತನ ಮುಖಕ್ಕೆ ಒದ್ದಿರುವ ಆರೋಪದ ಮೇಲೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ಛತ್ತರ್‌ಪುರ ನಗರದ ಛತ್ರಸಲ್ ನಗರ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಈ ಪ್ರಕರಣದ ಸಂತ್ರಸ್ತ 11ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಸಂತ್ರಸ್ತ ಮತ್ತು ಆತನ ಕುಟುಂಬದವರು ನೀಡಿದ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 296 (ಅಸಭ್ಯತೆಗೆ ಸಂಬಂಧಿಸಿದ ಕಾಯ್ದೆ) ಮತ್ತು 115 (2) (ಯಾವುದೇ ವ್ಯಕ್ತಿಗೆ ನೋವುಂಟುಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿವಿಲ್ ಲೈನ್ ಪೊಲೀಸ್ ಠಾಣೆ ಉಸ್ತುವಾರಿ ಅಧಿಕಾರಿ ವಾಲ್ಮೀಕಿ ಚೌಬೆ ತಿಳಿಸಿದ್ದಾರೆ.
ದಸರಾ ಸಂದರ್ಭ ನಡೆದ ಮೆರವಣಿಗೆಯಲ್ಲಿ ಬಾಲಕ ಮತ್ತು ಆರೋಪಿಗಳ ನಡುವೆ ನಡೆದ ವಾಗ್ವಾದದ ನಂತರ ಈ ಕೃತ್ಯ ನಡೆದಿದೆ. ಪ್ರಕರಣ ದಾಖಲಾದ ನಂತರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಚೌಬೆ ತಿಳಿಸಿದ್ದಾರೆ.
ಕೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಆರೋಪಿಗಳಲ್ಲಿ ಒಬ್ಬಾತನ ಬೂಟುಗಳನ್ನು ಬಾಲಕನಿಂದ ನೆಕ್ಕಿಸಿರುವುದು ಮತ್ತು ಬಾಲಕನ ಮುಖಕ್ಕೆ ಬೂಟು ಕಾಲಿನಿಂದ ಒದ್ದಿರುವ ದೃಶ್ಯಗಳು ವಿಡಿಯೊದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.