ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಬೊಜ್ಜು ಇಳಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಎರಡು ವರ್ಷಗಳಲ್ಲಿ 130 ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ.
ಲಜಪತ್ ನಗರದ ನಿವಾಸಿ ರವಿ ಖಾತ್ರಿ (ಹೆಸರು ಬದಲಿಸಲಾಗಿದೆ) ಶಸ್ತ್ರ ಚಿಕಿತ್ಸೆಗೂ ಮುನ್ನ 250 ಕೆ.ಜಿಯಷ್ಟಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ನಿಯಮಿತ ಡಯಟ್‌ನಿಂದ ತೂಕ ಇಳಿಸಿಕೊಂಡಿದ್ದಾರೆ ಎಂದು ಏಮ್ಸ್ ವೈದ್ಯರು ಮಾಹಿತಿ ನೀಡಿದ್ದಾರೆ.
‘ಈ ಯುವಕನ ದೇಹದಲ್ಲಿ ಅತಿಯಾದ ಬೊಜ್ಜು ಇತ್ತು. ಇದರಿಂದ ಆತ ನಡೆದಾಡುವುದೂ ಕಷ್ಟವಾಗಿತ್ತು. ತನ್ನ ದೇಹದ ಗಾತ್ರದಿಂದಾಗಿ ಆತ ಖಿನ್ನತೆಗೂ ಒಳಗಾಗಿದ್ದ. ತೂಕ ಕಡಿಮೆ ಮಾಡಿಕೊಳ್ಳಲು ಹಂಬಲಿಸುತ್ತಿದ್ದ’ ಎಂದು ಏಮ್ಸ್‌ನ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯ ಡಾ. ಸಂದೀಪ್ ಅಗರ್‌ವಾಲ್ ತಿಳಿಸಿದರು.
‘ಮಿತ ಆಹಾರ ಸೇವಿಸಿ 10 ಕೆ.ಜಿ ಇಳಿಸಿಕೊಳ್ಳುವಂತೆ ನಾವು ಯುವಕನಿಗೆ ಸೂಚಿಸಿದೆವು. ಬಳಿಕ ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿದೆವು. ಆದರೆ ಯುವಕನಿಂದ ಅದು ಸಾಧ್ಯವಾಗಲಿಲ್ಲ. ಬಳಿಕ ಆತನನ್ನು ಎರಡು ವಾರಗಳವರೆಗೆ ಒಳರೋಗಿಯಾಗಿ ದಾಖಲಿಸಿಕೊಂಡು 10 ಕೆ.ಜಿ ತೂಕ ಇಳಿಸಿದೆವು’ ಎಂದು ಅವರು ಹೇಳಿದರು.
‘ಬಳಿಕಬೊಜ್ಜು ಇಳಿಸುವ ಶಸ್ತ್ರಚಿಕಿತ್ಸೆಯಿಂದ ಯುವಕ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡಿದೆವು. ಇದರಿಂದ ಯುವಕನ ಆಹಾರ ಸೇವಿಸುವ ಸಾಮರ್ಥ್ಯವೂ ಕಡಿಮೆಯಾಯಿತು. ಕ್ರಮೇಣ ಆತನ ತೂಕದಲ್ಲಿ ಇಳಿಕೆ ಕಂಡು ಬಂದಿತು’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.