ADVERTISEMENT

ಮೀಸಲಾತಿ ಬೇಡಿಕೆಯೊಡ್ಡಿ ಪ್ರತಿಭಟನೆಗೆ ಮುಂದಾಗಿದ್ದಾರೆ ಮಹಾರಾಷ್ಟ್ರದ ಬ್ರಾಹ್ಮಣರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 3:12 IST
Last Updated 16 ಜನವರಿ 2019, 3:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮರಾಠ ಮತ್ತು ಧಂಗಾರ್ ಸಮುದಾಯದವರು ಮೀಸಲಾತಿಗಾಗಿ ಬೇಡಿಕೆಯೊಡ್ಡಿ ಪ್ರತಿಭಟನೆಗಳನ್ನು ನಡೆಸಿದ ನಂತರ ಇದೀಗ ಮಹಾರಾಷ್ಟ್ರದಲ್ಲಿ ಬ್ರಾಹ್ಮಣರು ಮೀಸಲಾತಿಗಾಗಿ ಹೋರಾಡಲು ನಿರ್ಧರಿಸಿರುವುದಾಗಿಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಬ್ರಾಹ್ಮಣರ ಸಂಘಟನೆಯಾದ ಸಮಸ್ತ ಬ್ರಾಹ್ಮಿಣ್ ಸಮಾಜ ವಿವಿಧ ಬೇಡಿಕೆಯನ್ನೊಡ್ಡಿ ಮುಂಬೈನಲ್ಲಿರುವ ಆಜಾದ್ ಮೈದಾನದಲ್ಲಿ ಜನವರಿ 22ರಂದು ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಿದೆ.

ಮೇಲ್ಜಾತಿಗೆ ಶೇ.10ರಷ್ಟು ಮೀಸಲಾತಿ ನೀಡುವ ನಿರ್ಧಾರಕ್ಕೆ ಸಂಸತ್‍ನಲ್ಲಿ ಅಂಗೀಕಾರ ಲಭಿಸಿದೆ.ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಬೇಕು. ಈ ಬೇಡಿಕೆಯನ್ನೊಡ್ಡಿ ನಾವು ಆಜಾದ್ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ಸಮಸ್ತ್ ಬ್ರಾಹ್ಮಿಣ್ ಸಮಾಜದ ಸಂಚಾಲಕ ವಿಶ್ವಜೀತ್ ದೇಶ್‍ಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರಿದ್ದಾರೆ. ಇಲ್ಲಿರುವ ಬ್ರಾಹ್ಮಣರು ಹಿಂದುಳಿದಿದ್ದು, ಅರ್ಚಕ ವೃತ್ತಿಯಲ್ಲಿದ್ದವರಿಗೂ ಹೆಚ್ಚಿನ ಆದಾಯ ಇಲ್ಲ. ಹಾಗಾಗಿ ನಮ್ಮ ಸಂಘಟನೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಬ್ರಾಹ್ಮಣರಿಗೆ ತಿಂಗಳಲ್ಲಿ ₹5,000 ಪಿಂಚಣಿ ಸೇರಿದಂತೆ 15 ಬೇಡಿಕೆಗಳನ್ನು ಮುಂದಿಡಲಿದೆ.

ನಮ್ಮ ಸಮುದಾಯಕ್ಕಾಗಿ ಪ್ರತ್ಯೇಕ ಆರ್ಥಿಕ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು.ಪ್ರತಿ ಜಿಲ್ಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಸ್ನಾತಕೋತ್ತರ ಪದವಿ ವರೆಗೆ ಉಚಿತ ಶಿಕ್ಷಣ ನೀಡಬೇಕೆಂದು ಸಂಘಟನೆ ಆಗ್ರಹಿಸಿದೆ.

ಮಹಾರಾಷ್ಟ್ರದಲ್ಲಿ ಮರಾಠರು ಮೀಸಲಾತಿಗಾಗಿ ಹೋರಾಟ ನಡೆಸಿದ್ದರಿಂದ 2018 ಡಿಸೆಂಬರ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಶೇ. 16ರಷ್ಟು ಮೀಸಲಾತಿ ನೀಡಿತ್ತು. ಇದೀಗ ರಾಜ್ಯದಲ್ಲಿ ಒಟ್ಟು ಮೀಸಲಾತಿಯ ಪ್ರಮಾಣಶೇ. 68 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.