ADVERTISEMENT

ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಘೋರ ಅವಮಾನ; ಕ್ಷಮೆಯಾಚಿಸಲಿ: ಪ್ರಮೋದ್ ಸಾವಂತ್

ಪಿಟಿಐ
Published 2 ಜುಲೈ 2024, 6:41 IST
Last Updated 2 ಜುಲೈ 2024, 6:41 IST
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್    

ಪಣಜಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹಿಂದುತ್ವದ ಬಗ್ಗೆ ಹೇಳಿಕೆ ನೀಡುವ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಹಾಗಾಗಿ ಅವರು ವಿಶ್ವದಾದ್ಯಂತ ಇರುವ ಕೋಟ್ಯಂತರ ಹಿಂದೂಗಳಿಗೆ ಕ್ಷಮೆಯಾಚಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಹೇಳಿಕೆ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಇಡೀ ಕಾಂಗ್ರೆಸ್‌ ‘ದ್ವೇಷ’ದ ಅಂಗಡಿಯಾಗಿದ್ದು, ಹಿಂದೂಗಳನ್ನು ‘ಹಿಂಸಾಚಾರಿಗಳು’ ಎಂದು ಕರೆಯುವ ಮೂಲಕ ರಾಹುಲ್ ಘೋರ ಅವಮಾನ ಮತ್ತು ಅಗೌರವ ತೋರಿದ್ದಾರೆ’ ಎಂದು ಸಾವಂತ್ ಟೀಕಿಸಿದ್ದಾರೆ.

‘ಸನಾತನ ಧರ್ಮ ಅಥವಾ ಹಿಂದೂಗಳನ್ನು ಅಪಹಾಸ್ಯ ಮಾಡಿರುವ ಕಾಂಗ್ರೆಸ್‌ ಮತ್ತು ‘ಇಂಡಿಯಾ’ ಬಣದ ನಾಯಕರ ದುರಹಂಕಾರ ಅತ್ಯಂತ ಖಂಡನೀಯ’ ಎಂದು ಸಾವಂತ್ ಗುಡುಗಿದ್ದಾರೆ.

ADVERTISEMENT

ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ್ದ ರಾಹುಲ್ ಗಾಂಧಿ, ‘ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ’ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಈ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಗಿತ್ತು.

ರಾಹುಲ್‌ ಭಾಷಣಕ್ಕೆ ಆಡಳಿತ ಪಕ್ಷದ ಸದಸ್ಯರು ಪದೇ ಪದೇ ಅಡ್ಡಿಪಡಿಸಿದ್ದರು. 6–7 ಸಚಿವರು ಎದ್ದು ನಿಂತು ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಆಗ ರಾಹುಲ್‌ ಜೋರಾಗಿ, ‘ನಾನು ಹಿಂದೂ ಸಮುದಾಯದ ಬಗ್ಗೆ ಹೇಳಿಲ್ಲ. ಹಿಂದೂ ಯಾವತ್ತೂ ದ್ವೇಷ ಹಾಗೂ ಹಿಂಸೆಯನ್ನು ಹರಡುವುದಿಲ್ಲ. ಮೋದಿ ಎಂದರೆ ಇಡೀ ಹಿಂದೂ ಸಮಾಜವಲ್ಲ, ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್‌ಎಸ್‌ಎಸ್ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ದ್ವೇಷ ಹಾಗೂ ಹಿಂಸಾಚಾರವನ್ನು ಹರಡುತ್ತದೆ’ ಎಂದು ತಿರುಗೇಟು ಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.