ಕೋಲ್ಕತ್ತ: ವೈದ್ಯ ವಿದ್ಯಾರ್ಥಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅವರನ್ನು ನಿಂದಿಸುತ್ತಿರುವ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವವರ ಬೆರಳುಗಳನ್ನು ಕತ್ತರಿಸಬೇಕು ಎಂದು ಟಿಎಂಸಿಯ ಹಿರಿಯ ಸಚಿವ ಉದ್ಯಾನ್ ಗುಹಾ ಅವರು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅವರ ಈ ಮಾತು ಭಾರಿ ವಿವಾದಕ್ಕೆ ಕಾರಣವಾಗಿದೆ. ಆದರೆ ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲು ಸುದ್ದಿ ಸಂಸ್ಥೆ ಪಿಟಿಐಗೆ ಸಾಧ್ಯವಾಗಿಲ್ಲ.
‘ಮಮತಾ ಬ್ಯಾನರ್ಜಿಯವರ ಬಗ್ಗೆ ಮಾತನಾಡುತ್ತಿರುವವರು, ಅವರ ಕಡೆಗೆ ಬೆರಳು ತೋರುತ್ತಿರುವವರು ಹಾಗೂ ಅವರ ರಾಜೀನಾಮೆ ಕೇಳುತ್ತಿರುವವರ ತಂತ್ರ ಫಲಿಸದು. ಮಮತಾ ಅವರ ಕಡೆ ಬೆರಳು ತೋರುತ್ತಿರುವವರ ಬೆರಳುಗಳನ್ನು ಕತ್ತರಿಸಬೇಕು’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಆರ್.ಜಿ ಕರ್ ಆಸ್ಪತ್ರೆ ಮೇಲೆ ದಾಳಿ ನಡೆಸುತ್ತಿರುವಾಗಲೂ ಪೊಲೀಸರು ಲಾಠಿ ಚಾರ್ಜ್ ಮಾಡದೇ ಸುಮ್ಮನಿದ್ದರು. ಪಶ್ಚಿಮ ಬಂಗಾಳವನ್ನು ಮತ್ತೊಂದು ಬಾಂಗ್ಲಾದೇಶವಾಗಿ ಪರಿವರ್ತಿಸಲು ನಾವು ಎಂದಿಗೂ ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 15ರಂದು ಗುಂಪೊಂದು ಆಸ್ಪತ್ರೆಯೊಳಗೆ ನುಗ್ಗಿ ತುರ್ತು ಚಿಕಿತ್ಸಾ ಘಟಕ, ಆರೈಕೆ ವಿಭಾಗ ಹಾಗೂ ಔಷಧ ಅಂಗಡಿಯನ್ನು ಧ್ವಂಸ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.