ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣ ವರದಿಯಾಗಿರುವ ಇಲ್ಲಿನ ಸರ್ಕಾರಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ಟ್ವಿಟರ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕೊಠಡಿಯ ಗೋಡೆ ಒಡೆದು, ಕಾಮಗಾರಿ ನಡೆಸಲಾಗುತ್ತಿದೆ. ಆ ಮೂಲಕ ಸಾಕ್ಷ್ಯ ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿರಾಸಕ್ತಿ ಹಾಗೂ ಕೊಲ್ಕತ್ತ ಪೊಲೀಸರು ಪ್ರಕರಣವನ್ನು ಮಚ್ಚಿಹಾಕಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಪಶ್ಚಿಮ ಬಂಗಾಳವು ಆಕ್ರೋಶದಿಂದ ಕುದಿಯುತ್ತಿದೆ. ಇಂತಹ ಹೊತ್ತಿನಲ್ಲಿ, ವಿದ್ಯಾರ್ಥಿನಿಯು ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕೊಠಡಿಯ ಗೋಡೆ ಒಡೆದು ಕಾಮಗಾರಿ ನಡೆಸಲಾಗುತ್ತಿದೆ. ಆ ಮೂಲಕ ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಕೊಲೆಗಾರರ ಬಳಿಗೆ ಕರೆದೊಯ್ಯಲು ನೆರವಾಗಬಹುದಾದ ಮಹತ್ವದ ಸಾಕ್ಷ್ಯಗಳನ್ನು ನಾಶಮಾಡಲಾಗುತ್ತಿದೆ ಎಂದು ಗುಡುಗಿದ್ದಾರೆ.
ಮಮತಾ ಅವರು ಸಾಕ್ಷ್ಯಗಳ ನಾಶಕ್ಕೆ ಹಾಗೂ ಘೋರ ಕೃತ್ಯದಲ್ಲಿ ಭಾಗಿಯಾದವರ ರಕ್ಷಣೆಗೆ ಮುಂದಾಗಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕೃತ್ಯದಲ್ಲಿ ಭಾಗಿಯಾದವರು ಟಿಎಂಸಿಯ ಪ್ರಭಾವಿ ನಾಯಕರ ಕುಟುಂಬದವರೂ ಆಗಿರಬಹುದು ಎಂದು ಅಂದಾಜಿಸಿದ್ದಾರೆ.
ಇದೇ ವಿಡಿಯೊವನ್ನು ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ಹಂಚಿಕೊಂಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.
ಕೊಲೆ, ಅತ್ಯಾಚಾರ ಪ್ರಕರಣದ ತನಿಖೆಯನ್ನು ಕಲ್ಕತ್ತ ಹೈಕೋರ್ಟ್ ಮಂಗಳವಾರ ಸಿಬಿಐಗೆ ಮಂಗಳವಾರ ವರ್ಗಾಯಿಸಿದೆ. ಅದರಂತೆ, ಕಾರ್ಯಪ್ರವೃತ್ತರಾಗಿರುವ ಸಿಬಿಐ ತಂಡ ಇಂದು (ಬುಧವಾರ) ಕೋಲ್ಕತ್ತಕ್ಕೆ ಬಂದಿದ್ದು, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ವೈದ್ಯಕೀಯ ಹಾಗೂ ವಿಧಿವಿಜ್ಞಾನ ತಜ್ಞರೂ ಸಿಬಿಐ ತಂಡದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.