ಲಂಡನ್: ಯುರೋಪಿಯನ್ ಒಕ್ಕೂಟ (ಇಯು) ಹೊರ ಬರಲು ಬ್ರಿಟನ್‌ಗೆ ಮೇ 22ರ ವರೆಗೆ ಒಕ್ಕೂಟವು ಅವಕಾಶ ನೀಡಿದೆ.
ಈಗಿನ ವ್ಯವಸ್ಥೆಯಂತೆ, ಬ್ರೆಕ್ಸಿಟ್ ಒಪ್ಪಂದಕ್ಕೆ ಅನುಮೋದನೆ ಪಡೆಯಲು ಮಾರ್ಚ್ 29 ಕೊನೆಯ ದಿನವಾಗಿತ್ತು. ಈಗಾಗಲೇ ಎರಡು ಬಾರಿ ಈ ಒಪ್ಪಂದಕ್ಕೆ ಸಂಸತ್‌ನಲ್ಲಿ ಸೋಲುಂಟಾಗಿದ್ದು, ಮತ್ತೊಂದು ಬಾರಿ ಈ ಒಪ್ಪಂದವನ್ನು ಮತಕ್ಕೆ ಹಾಕುವಂತೆ ಪ್ರಧಾನಿ ತೆರೇಸಾ ಮೇ ಮಾಡಿದ್ದ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದ್ದರು.
ಈಗ ಮೂರನೇ ಬಾರಿಗೆ ಸಂಸತ್‌ನಲ್ಲಿ ಒಪ್ಪಂದ ಮಂಡನೆಯಾಗುತ್ತಿದ್ದು, ಏಪ್ರಿಲ್ 12ರ ಒಳಗಾಗಿ ತನ್ನ ಮುಂದಿನ ನಡೆಯನ್ನು ನಿರ್ಧರಿಸುವಂತೆ ಬ್ರಿಟನ್‌ಗೆ ಇಯು ತಾಕೀತು ಮಾಡಿದೆ.
‘ಏಪ್ರಿಲ್ 12ರ ಒಳಗಾಗಿ ಸಂಸತ್‌ನಲ್ಲಿ ಈ ಒಪ್ಪಂದಕ್ಕೆ ಅನುಮೋದನೆ ಸಿಗದೇ ಇದ್ದರು ಸಹ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರ ನಡೆಯಬಹುದಾಗಿದೆ. ಒಪ್ಪಂದದ ಪ್ರಕಾರ ಇಲ್ಲವೇ ಒಪ್ಪಂದ ಹೊರತಾಗಿಯೂ ನಿರ್ಗಮನ ಅಥವಾ ಕಲಂ 50ನ್ನು ರದ್ದುಪಡಿಸುವ ಆಯ್ಕೆಗಳು ಬ್ರಿಟನ್ ಸರ್ಕಾರದ ಮುಂದಿವೆ’ ಎಂದು ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಹೇಳಿದ್ದಾರೆ.
‘ಬ್ರಿಟನ್ ಪಾಲಿಗೆ ಏಪ್ರಿಲ್ 12 ಮಹತ್ವದ ದಿನ. ಯುರೋಪಿಯನ್ ಸಂಸತ್‌ಗೆ ಚುನಾವಣೆ ನಡೆಸಬೇಕೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಇದ್ದರೆ, ಬ್ರೆಕ್ಸಿಟ್ ಒಪ್ಪಂದದ ಅವಧಿಯನ್ನು ವಿಸ್ತರಿಸಲು ಸಾಧ್ಯವಾಗದು’ ಎಂದೂ ಟಸ್ಕ್ ಸ್ಪಷ್ಟಪಡಿಸಿದ್ದಾರೆ.
ಈಗ ನಮ್ಮ ಆಯ್ಕೆ ಸ್ಪಷ್ಟ: ತೆರೇಸಾ ಮೇ
‘ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾದ ಹಂತವನ್ನು ಈಗ ನಾವೆಲ್ಲಾ ತಲುಪಿದ್ದೇವೆ. ಬ್ರೆಕ್ಸಿಟ್ ಒಪ್ಪಂದದಂತೆ ನಾವು ಒಕ್ಕೂಟದಿಂದ ಹೊರನಡೆಯಲು ಎಲ್ಲ ಪ್ರಯತ್ನವನ್ನು ನಾನು ಮಾಡುತ್ತೇನೆ. ದೇಶವನ್ನು ಮುನ್ನಡೆಸುತ್ತೇನೆ’ ಎಂದು ಪ್ರಧಾನಿ ಮೇ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.