ಲಖನೌ/ಗೊಂಡಾ: ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಚತೈಪುರ ಗ್ರಾಮದ ಬಳಿ ಬುಧವಾರ ಬೆಳಿಗ್ಗೆ ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಮಗ ಕರಣ್ ಭೂಷಣ್ ಸಿಂಗ್ ಅವರ ಬೆಂಗಾವಲು ಪಡೆ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಕೈಸರ್‌ಗಂಜ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕರಣ್ ಭೂಷಣ್ ಸಿಂಗ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ, ಅವರ ಬೆಂಗಾವಲು ವಾಹನದಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರನ್ನು ರೆಹಾನ್ ಖಾನ್ ಮತ್ತು ಶೆಹಜಾದ್ ಖಾನ್ (ಇಬ್ಬರೂ ಸೋದರ ಸಂಬಂಧಿಗಳು) ಎಂದು ಗುರುತಿಸಲಾಗಿದೆ. ಅವರು ಮೋಟಾರು ಬೈಕ್ ಚಲಾಯಿಸುತ್ತಿದ್ದಾಗ, ವೇಗವಾಗಿ ಬಂದ ಎಸ್‌ಯುವಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಬಳಿಕ ಅದು ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೀತಾದೇವಿ (60) ಎಂಬುವರಿಗೂ ಗುದ್ದಿದೆ. ಮಹಿಳೆಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದ ಶೆಹಜಾದ್ ಎರಡು ದಿನಗಳ ಹಿಂದಷ್ಟೇ ಮನೆಗೆ ಮರಳಿದ್ದರು.
ಸ್ಥಳೀಯರ ಆಕ್ರೋಶ: ಆಕ್ರೋಶಗೊಂಡ ಸ್ಥಳೀಯ ಗ್ರಾಮಸ್ಥರು ಕರ್ನೈಲ್‌ಗಂಜ್–ಹುಜೂರ್‌ಪುರ ರಸ್ತೆಯನ್ನು ತಡೆದು ಪ್ರತಿಭಟಿಸಿದರು. ಅಪಘಾತಕ್ಕೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿದರು. ಅಲ್ಲದೆ ಪ್ರತಿಭಟನಕಾರರ ಗುಂಪು ವಾಹನಕ್ಕೆ ಬೆಂಕಿ ಹಚ್ಚಲೂ ಯತ್ನಿಸಿತು ಎಂದು ಪೊಲೀಸರು ತಿಳಿಸಿದರು. ರಸ್ತೆಯಲ್ಲಿ ಸಂಚಾರ ತಡೆದಿದ್ದ ಪ್ರತಿಭಟನಕಾರರ ಮನವೊಲಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.
ಅಪಘಾತ ಸಂಬಂಧ ಕರ್ನೈಲ್‌ಗಂಜ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯ ಬಳಿಕ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರಣ್ ಭೂಷಣ್ ಸಿಂಗ್ ಅಭ್ಯರ್ಥಿಯಾಗಿರುವ ಕೈಸರ್‌ಗಂಜ್ ಕ್ಷೇತ್ರದಲ್ಲಿ ಮೇ 20ರಂದು ಚುನಾವಣೆ ನಡೆದಿತ್ತು.
ಟಿಎಂಸಿ ಟೀಕೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಟೀಕೆ ಮಾಡಿರುವ ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಬಿಜೆಪಿಯು ನಾಗರಿಕರನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಎಂದಿದ್ದಾರೆ. ‘ಇದು 2021ರಲ್ಲಿ ಲಖೀಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಬಿಜೆಪಿಯ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ವಾಹನ ಹರಿಸಿದ್ದನ್ನು ನೆನಪಿಸುತ್ತದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಬಿಜೆಪಿ ತೊಲಗಿಸಿ ಜೀವ ಉಳಿಸಿ’ ಎಂದು ಅವರು ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.