ಶಿಮ್ಲಾ: ‘ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಬೇಕಾದರೆ ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು’ ಎಂದು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ.
‘ನನ್ನ ಭೇಟಿಗೆ ಬರುವ ಜನರಿಗೆ ಆಗಬಹುದಾದ ಅನಾನುಕೂಲತೆಯನ್ನು ತಪ್ಪಿಸುವ ಸಲುವಾಗಿ ಗುರುತಿನ ಚೀಟಿಯನ್ನು ತೋರಿಸುವಂತೆ ಸೂಚಿಸಲಾಗಿದೆ’ ಎಂದು ಕಂಗನಾ ಹೇಳಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.
‘ಹಿಮಾಚಲ ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದ್ದರಿಂದ ಮಂಡಿ ಪ್ರದೇಶದಲ್ಲಿರುವವರು ಆಧಾರ್ ಕಾರ್ಡ್ ಹೊಂದಿರುವುದು ಅತ್ಯಗತ್ಯ. ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳ ಬಗ್ಗೆಯೂ ಪತ್ರದಲ್ಲಿ ಬರೆಯಬೇಕು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಸಾಮಾನ್ಯ ಜನರು ಬಹಳಷ್ಟು ಅನಾನುಕೂಲತೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.
‘ನಿಮ್ಮ ಕೆಲಸದ ಬಗ್ಗೆ ನೀವೇ ವೈಯಕ್ತಿಕವಾಗಿ ಭೇಟಿಯಾಗುವುದು ಉತ್ತಮ. ಹಾಗೆಯೇ ಹಿಮಾಚಲದ ಉತ್ತರ ಭಾಗದಲ್ಲಿರುವ ಜನರು ಸಹಾಯದ ಅಗತ್ಯವಿದ್ದರೆ ಮನಾಲಿಯಲ್ಲಿರುವ ನನ್ನ ಮನೆಗೆ ಭೇಟಿ ನೀಡಿ. ಆದೇ ರೀತಿ ಮಂಡಿಯಲ್ಲಿರುವ ಜನರು ಸಹ ಕಚೇರಿಗೆ ಭೇಟಿ ನೀಡುವ ಮೂಲಕ ನೆರವು ಪಡೆಯಬಹುದು’ ಎಂದು ತಿಳಿಸಿದ್ದಾರೆ.
ಕಂಗನಾ ರನೌತ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಹಾಗೂ ಲೋಕೋಪಯೋಗಿ ಸಚಿವರೂ ಆಗಿರುವ ವಿಕ್ರಮಾದಿತ್ಯ ಸಿಂಗ್, ‘ಜನರು ನನ್ನನ್ನು ಭೇಟಿಯಾಗಲು ಆಧಾರ್ ಕಾರ್ಡ್ ಅಥವಾ ಯಾವುದೇ ದಾಖಲೆ ತರುವ ಅಗತ್ಯವಿಲ್ಲ’ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
‘ನಾವು ಜನಪ್ರತಿನಿಧಿಗಳಾಗಿದ್ದೇವೆ. ರಾಜ್ಯದ ಪ್ರತಿಯೊಂದು ವರ್ಗದ ಜನರನ್ನು ಭೇಟಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಸಣ್ಣ ಕೆಲಸವೇ ಇರಲಿ ಅಥವಾ ದೊಡ್ಡ ಕೆಲಸವೇ ಇರಲಿ, ನೀತಿ ವಿಚಾರವೇ ಆಗಿರಲಿ ಆಥವಾ ವೈಯಕ್ತಿಕ ಕೆಲಸವೇ ಆಗಿರಲಿ... ಜನರು ಯಾವುದೇ ಗುರುತಿನ ಚೀಟಿಯನ್ನು ತರುವ ಅವಶ್ಯಕತೆ ಇಲ್ಲ’ ಎಂದು ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.