ADVERTISEMENT

ಲೋಕಸಭೆ ಚುನಾವಣೆ ಜಾಹೀರಾತು: ಪಾರದರ್ಶಕತೆಗಾಗಿ ಗೂಗಲ್‌ನಿಂದ ಹಲವು ಕ್ರಮ

ಸಿಗಲಿದೆ ಜಾಹೀರಾತುದಾರರ, ವ್ಯಯಿಸಿದ ಹಣದ ಕುರಿತ ಮಾಹಿತಿ * ಚುನಾವಣಾ ಆಯೋಗದ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಜಾಹೀರಾತು ಪ್ರಕಟಿಸುವ ಅವಕಾಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 5:09 IST
Last Updated 23 ಜನವರಿ 2019, 5:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಆನ್‌ಲೈನ್ ಜಾಹೀರಾತುಗಳಲ್ಲಿ ಹೆಚ್ಚು ಪಾರದರ್ಶಕತೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೂಗಲ್‌ನ ಭಾರತ ಘಟಕ ತಿಳಿಸಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಜನರಿಗೆ ಸಹಾಯವಾಗುವ ಮತ್ತು ಚುನಾವಣಾ ಸಂಬಂಧಿ ಮಾಹಿತಿ ನೀಡುವ ಮೂಲಕ ಆನ್‌ಲೈನ್ ಜಾಹೀರಾತುಗಳಲ್ಲಿ ಹೆಚ್ಚು ಪಾರದರ್ಶಕತೆ ತರಲಾಗುವುದು ಎಂದು ‘ಗೂಗಲ್‌ ಇಂಡಿಯಾ’ದ ಸಾರ್ವಜನಿಕ ನೀತಿ ನಿರ್ದೇಶಕ ಚೇತನ್ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಗೂಗಲ್‌ ಇಂಡಿಯಾ ಬ್ಲಾಗ್‌ನಲ್ಲಿ ಅವರು ನೀಡಿರುವ ಮಾಹಿತಿ ಇಲ್ಲಿದೆ:

ಜಾಹೀರಾತುದಾರರು ಮತ್ತು ವೆಚ್ಚದ ಮಾಹಿತಿ

ADVERTISEMENT

‘ದೇಶದ ಮುಂದಿನ ಸರ್ಕಾರವನ್ನು ಆಯ್ಕೆ ಮಾಡಲು85 ಕೋಟಿಗೂ ಹೆಚ್ಚು ಜನ ಮತ ಚಲಾಯಿಸುವ ನಿರೀಕ್ಷೆ ಇದೆ. ಚುನಾವಣಾ ಜಾಹೀರಾತಿನ ಬಗ್ಗೆ ತಿಳಿದುಕೊಳ್ಳಲು ಜನರಿಗೆ ನೆರವಾಗಲಿದ್ದೇವೆ. ಚುನಾವಣಾ ಜಾಹೀರಾತುಗಳಲ್ಲಿ ಹೆಚ್ಚು ಪಾರದರ್ಶಕತೆ ತರುವುದಕ್ಕಾಗಿ ಭಾರತದರಾಜಕೀಯ ಜಾಹೀರಾತುಗಳ ಪಾರ್ದರ್ಶಕತೆ ವರದಿ ಮತ್ತು ಸರ್ಚಬಲ್ ಪೊಲಿಟಿಕಲ್ ಆ್ಯಡ್ಸ್ ಲೈಬ್ರರಿಪರಿಚಯಿಸಲಿದ್ದೇವೆ. ಇವುಗಳ ಮೂಲಕ, ನಮ್ಮಲ್ಲಿ ಯಾರು ಚುನಾವಣಾ ಜಾಹೀರಾತುಗಳನ್ನು ಪ್ರಕಟಿಸುತ್ತಾರೆ ಮತ್ತು ಎಷ್ಟು ಹಣ ವ್ಯಯಿಸುತ್ತಾರೆ ಎಂಬುದನ್ನು ತಿಳಿಯಬಹುದಾಗಿದೆ.ಭಾರತದ ರಾಜಕೀಯ ಜಾಹೀರಾತುಗಳ ಪಾರ್ದರ್ಶಕತೆ ವರದಿ 2019ರ ಮಾರ್ಚ್‌ನಿಂದ ಆರಂಭವಾಗಲಿದೆ.

ಚುನಾವಣಾ ಜಾಹೀರಾತಿಗೆ ಹೊಸ ನೀತಿ

ಭಾರತಕ್ಕಾಗಿಯೇ ಚುನಾವಣಾ ಜಾಹೀರಾತು ನೀತಿಯೊಂದನ್ನೂ ರೂಪಿಸಿದ್ದೇವೆ. ಇದರ ಪ್ರಕಾರ, ಚುನಾವಣಾ ಸಂಬಂಧಿ ಜಾಹೀರಾತು ಪ್ರಕಟಿಸುವವರು ಪ್ರತಿಯೊಂದು ಜಾಹೀರಾತಿಗೂ ಭಾರತೀಯ ಚುನಾವಣಾ ಆಯೋಗದಿಂದ ಅಥವಾ ಆಯೋಗ ಮಾನ್ಯ ಮಾಡಿರುವ ಸಂಸ್ಥೆಯಿಂದ ಮುಂಚಿತವಾಗಿ ಪ‍್ರಮಾಣಪತ್ರವನ್ನು ಪಡೆದಿರಬೇಕು. ಚುನಾವಣಾ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಜಾಹೀರಾತುದಾರರ ಗುರುತನ್ನು ಗೂಗಲ್ ದೃಢೀಕರಿಸಲಿದೆ. ಈ ದೃಢೀಕರಣ ಪ್ರಕ್ರಿಯೆ ಫೆಬ್ರುವರಿ 14ರಿಂದ ಆರಂಭಗೊಳ್ಳಲಿದೆ.

ಲಭ್ಯವಾಗಲಿದೆ ಜಾಹೀರಾತಿಗೆ ಹಣ ನೀಡುವವರ ಮಾಹಿತಿ

ಗೂಗಲ್‌ನಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತುಗಳಿಗೆ ಯಾರು ಹಣ ನೀಡುತ್ತಾರೆ ಎಂಬುದನ್ನೂ ಬಹಿರಂಗಪಡಿಸಲಾಗುವುದು. ಹೆಚ್ಚಿನ ಮಾಹಿತಿಗೆ ಜಾಹೀರಾತುದಾರರು ಭಾರತದ ಚುನಾವಣಾ ಜಾಹೀರಾತು ನೀತಿ ತಾಣಕ್ಕೆ ಭೇಟಿ ನೀಡಬಹುದು.

ಮತದಾರರಿಗೆ ಮಾಹಿತಿ ನೀಡಲು ಕ್ರಮ

ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಜನರಿಗೆ ಅಗತ್ಯವಿರುವ ಮಾಹಿತಿಯ ಬಗ್ಗೆಯೂ ನಮಗೆ ಅರಿವಿದೆ. ಭಾರತೀಯ ಚುನಾವಣಾ ಆಯೋಗ ಮತ್ತು ಇತರ ಅಧಿಕೃತ ಮೂಲಗಳ ಮಾಹಿತಿಯನ್ನೂ ಗೂಗಲ್ ಒದಗಿಸಲಿದೆ. ಚುನಾವಣೆಗಳ ಕುರಿತು ಮತ್ತು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಹೇಗೆ ನೆರವಾಗಬಹುದು ಎಂಬ ಬಗ್ಗೆಯೂ ನಾವು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದೇವೆ. ಇಂದು ಕೈಗೊಂಡ ನಿರ್ಧಾರವೂ ಈ ನಿಟ್ಟಿನಲ್ಲಿಯೇ ಇದೆ. ಚುನಾವಣಾ ಪಾರದರ್ಶಕತೆ ವಿಚಾರದಲ್ಲಿ ನಾವು ಬದ್ಧರಾಗಿದ್ದು, ಅದಕ್ಕಾಗಿ ಇನ್ನಷ್ಟು ಕ್ರಮ ಕೈಗೊಳ್ಳಲಿದ್ದೇವೆ ಎಂದುಚೇತನ್ ಕೃಷ್ಣಸ್ವಾಮಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.