ಹೈದರಬಾದ್: ಮಹಿಳೆಯರಿಗೆ ಟೊಮೆಟೊ ವಿತರಿಸುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಮಗ ಕೆ.ಟಿ ರಾಮ್‌ರಾವ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಪಕ್ಷದ ಕಾರ್ಯಧ್ಯಕ್ಷ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ. ಟಿ. ರಾಮ್‌ರಾವ್ ಇಂದು ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪಕ್ಷದ ವಾರಂಗಲ್ ಮುಖಂಡ ರಾಜನಾಳ ಶ್ರೀಹರಿ ತಮ್ಮ ನಾಯಕನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಬಯಸಿದ್ದು, ಮಹಿಳೆಯರಿಗೆ ಟೊಮೆಟೊ ವಿತರಿಸಿದ್ದಾರೆ.
'ಮುಖ್ಯಮಂತ್ರಿಯಾಗಿ ಕೆ. ಟಿ. ರಾಮ್‌ರಾವ್ ಅವರನ್ನು ಕಾಣುವ ಆಸೆಯಿದೆ. ಚೌರಸ್ತಾ ಸೆಂಟರ್‌ನಲ್ಲಿ ಸುಮಾರು 250-300 ಮಹಿಳೆಯರಿಗೆ ತಲಾ ಒಂದೂವರೆ ಕೆ.ಜಿ ಟೊಮೆಟೊವನ್ನು ಬುಟ್ಟಿಯಲ್ಲಿ ವಿತರಿಸಲಾಗಿದೆ' ಎಂದು ಶ್ರೀಹರಿ ತಿಳಿಸಿದ್ದಾರೆ.
'ಕೆ. ಟಿ. ರಾಮ್‌ರಾವ್ ಅವರು ರಾಜ್ಯದ ಹಿತದೃಷ್ಟಿಯಿಂದ ಉತ್ತಮ ಕೆಲಸ ಮಾಡಿದ್ದಾರೆ. ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಂದ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗಿದೆ' ಎಂದು ಹಾಡಿ ಹೊಗಳಿದ್ದಾರೆ.
ಈ ಹಿಂದೆ ದಸರಾ ಸಂದರ್ಭದಲ್ಲಿ ಪಕ್ಷದ 200 ಕಾರ್ಯಕರ್ತರಿಗೆ ಕೋಳಿ ಮಾಂಸ ಮತ್ತು ಮದ್ಯ ವಿತರಿಸಿ ಶ್ರೀಹರಿ ಸುದ್ದಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.