ತೆಲಂಗಾಣ: ನಟಿ ಸಮಂತಾ ರುತ್ ಪ್ರಭು ಮತ್ತು ನಟ ಅಕ್ಕಿನೇನಿ ನಾಗಚೈತನ್ಯ ವಿಚ್ಛೇದನ ವಿಚಾರವಾಗಿ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಆರೋಪ ಮೇಲೆ ಸಚಿವೆ ಕೊಂಡಾ ಸುರೇಖಾ ವಿರುದ್ಧ ಬಿಆರ್‌ಎಸ್ ನಾಯಕ ಕೆ.ಟಿ.ರಾಮರಾವ್(ಕೆಟಿಆರ್) ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಅಕ್ಟೋಬರ್ 2ರಂದು ಕೊಂಡಾ ಸುರೇಖಾ ಅವರಿಗೆ ಕೆಟಿಆರ್ ಲೀಗಲ್ ನೋಟಿಸ್ ನೀಡಿದ್ದರು.
'ನಾಗಾರ್ಜುನ ಒಡೆತನದ ಎನ್–ಕನ್ವೆನ್ಷನ್ ಸೆಂಟರ್ ನೆಲಸಮಗೊಳಿಸುವುದು ಬೇಡ ಎಂದಾದಲ್ಲಿ, ತನ್ನ ಬಳಿ ಸಮಂತಾ ಅವರನ್ನು ಕಳುಹಿಸುವಂತೆ ಕೆಟಿಆರ್ ಬೇಡಿಕೆ ಇಟ್ಟಿದ್ದರು. ಕೆಟಿಆರ್ ಬಳಿ ಹೋಗುವಂತೆ ಸಮಂತಾ ಅವರಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಆಕೆ ಒಪ್ಪಿಕೊಂಡಿರಲಿಲ್ಲ. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯಿತು‘ ಎಂದು ಸುರೇಖಾ ಆರೋಪಿಸಿದ್ದರು.
ಸುರೇಖಾ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸಚಿವೆಯ ಹೇಳಿಕೆಗೆ ಇಡೀ ತೆಲುಗು ಚಿತ್ರರಂಗ ಛೀಮಾರಿ ಹಾಕಿತ್ತು.
ತಮ್ಮ ಕುಟುಂಬದ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಾಗಚೈತನ್ಯ ತಂದೆ, ನಟ ನಾಗಾರ್ಜುನ ಅವರು ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದರು.
ವಿರೋಧ ವ್ಯಕ್ತವಾಗುತ್ತಲೇ ತಮ್ಮ ಹೇಳಿಕೆ ಹಿಂಪಡೆದಿರುವ ಸುರೇಖಾ ಅವರು, ಕ್ಷಮೆಯಾಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.