ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರನ್ನು ಬಿಆರ್‌ಎಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಆರ್‌ಎಸ್ ಪಕ್ಷ ಪೋಸ್ಟ್ ಮಾಡಿದೆ.
ತೆಲಂಗಾಣ ಭವನದಲ್ಲಿ ನಡೆದ ಸಭೆಯಲ್ಲಿ ಹೊಸದಾಗಿ ಚುನಾಯಿತರಾಗಿರುವ ಪಕ್ಷದ ಶಾಸಕರು ಕೆ. ಚಂದ್ರಶೇಖರ್ ರಾವ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು ಎಂದು ಬಿಆರ್‌ಎಸ್ ಪಕ್ಷ ಶನಿವಾರ ತಿಳಿಸಿದೆ.
ಬಿಆರ್‌ಎಸ್ ಪಕ್ಷದ ನಾಯಕ ಕೇಶವ ರಾವ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದೆ.
ಕೆ.ಸಿ ಚಂದ್ರಶೇಖರ್ ರಾವ್ ಅವರ ಅನಾರೋಗ್ಯ ಕಾರಣದಿಂದಾಗಿ ಅವರು ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಪ್ರಮಾಣ ವಚನ ಸ್ವೀಕರಿಸಲು ಮತ್ತೊಂದು ದಿನಾಂಕವನ್ನು ವಿಧಾನಸಭೆ ಕಾರ್ಯದರ್ಶಿ ಅವರಿಗೆ ಕೇಳಲಾಗಿದೆ ಎಂದು ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ ರಾಮ ರಾವ್ ಅವರು ‘ಎಕ್ಸ್‘ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ನಾನದ ಕೋಣೆಯಲ್ಲಿ ಜಾರಿ ಬಿದ್ದು ಮೂಳೆ ಮುರಿತದಿಂದ ಬಳಲುತ್ತಿದ್ದ ಕೆಸಿಆರ್ ಅವರಿಗೆ ಯಶೋಧ ಆಸ್ಪತ್ರೆಯ ವೈದ್ಯರು ಯಶಸ್ವಿ ಮೂಳೆ ಜೋಡಣೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಕೆಸಿಆರ್ ಅವರು(69) ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿಕೊಳ್ಳಲು ಆರರಿಂದ ಎಂಟು ವಾರ ಬೇಕಾಗುತ್ತದೆ. ಕೆಸಿಆರ್ ಅವರ ಮೇಲ್ವಿಚಾರಣೆಯನ್ನು ವೈದ್ಯರ ತಂಡವೊಂದು ನಿರಂತರವಾಗಿ ಮಾಡುತ್ತಿದ್ದು, ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದರು.
ಇತ್ತೀಚಿಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷವು 119 ಸ್ಥಾನಗಳ ಪೈಕಿ 39 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 64 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.