ಹೈದರಾಬಾದ್: ತೆಲಂಗಾಣ ಸಚಿವಾಲಯದ ಆವರಣದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸ್ಥಾಪಿಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪ್ರತಿಮೆಯನ್ನು, ತಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಕಿತ್ತೆಸೆಯುವುದಾಗಿ ಬಿಆರ್‌ಎಸ್ ಪಕ್ಷದ ಕಾರ್ಯಧ್ಯಕ್ಷ ಕೆ.ಟಿ. ರಾಮಾರಾವ್ ಸೋಮವಾರ ಹೇಳಿದ್ದಾರೆ.
ತೆಲಂಗಾಣದಲ್ಲಿ ಈ ಹಿಂದೆ ಇದ್ದ ಬಿಆರ್‌ಎಸ್ ನೇತೃತ್ವದ ಸರ್ಕಾರವು ಸಚಿವಾಲಯದ ಎದುರು ‘ತೆಲಂಗಾಣ ತಲ್ಲಿ’ (ತಾಯಿ) ಸ್ಥಾಪಿಸುವ ಯೋಜನೆ ಹೊಂದಿತ್ತು.
‘ಮುಂದಿನ ನಾಲ್ಕು ವರ್ಷಗಳಲ್ಲಿ ನಮ್ಮ ಕೆ. ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲಿದೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ರಾಜೀವ್ ಗಾಂಧಿ ಅವರ ಪ್ರತಿಮೆಯನ್ನು ಖಂಡಿತವಾಗಿಯೂ ತೆರವುಗೊಳಿಸುತ್ತೇವೆ. ಆಗ ಬೇರೆ ಸ್ಥಳದ ಮಾಹಿತಿಯನ್ನು ಕಾಂಗ್ರೆಸ್‌ನಿಂದ ಕೇಳಿಯೇ ಸ್ಥಳಾಂತರಿಸಲಾಗುವುದು. ಆದರೆ ತೆಲಂಗಾಣ ತಲ್ಲಿ ಪ್ರತಿಮೆಯನ್ನು ಖಂಡಿತವಾಗಿಯೂ ಸ್ಥಾಪಿಸಲಾಗುವುದು’ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಈ ಅವಸರದ ನಿರ್ಧಾರವನ್ನು ಪ್ರತಿಭಟಿಸಿದ ಅವರು, ‘ಪ್ರತಿಮೆ ಮಾತ್ರವಲ್ಲ, ಹೈದರಾಬಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜೀವ್ ಗಾಂಧಿ ಹೆಸರು ಇಟ್ಟಿರುವುದನ್ನೂ ಬಿಆರ್‌ಎಸ್ ಬದಲಿಸಲಿದೆ. ಅದರ ಬದಲು ತೆಲಂಗಾಣದ ಮೇರು ವ್ಯಕ್ತಿಯ ಹೆಸರನ್ನು ಇಡಲಾಗುವುದು’ ಎಂದಿದ್ದಾರೆ.
‘ಬೆಂಗಳೂರು ಹಾಗೂ ಮುಂಬೈನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಕ್ರಮವಾಗಿ ಕೆಂಪೇಗೌಡ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಇಡಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿರುವ ವಿಮಾನ ನಿಲ್ದಾಣಗಳಿಗೆ ಆಯಾ ರಾಜ್ಯಗಳ ಪ್ರಮುಖ ವ್ಯಕ್ತಿಗಳ ಹೆಸರನ್ನು ಇಡಬೇಕು’ ಎಂದು ಉದಾಹರಣೆ ಸಹಿತ ರಾಮಾರಾವ್ ಆಗ್ರಹಿಸಿದರು.
ಬೆಳೆ ಸಾಲ ಮನ್ನಾ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಬಹಿರಂಗ ಪತ್ರ ಬರೆದಿದ್ದರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಾರಾವ್, ‘ರೈತರ ಸಾಲವು ₹49 ಸಾವಿರ ಕೋಟಿಯಿಂದ ₹17,900 ಕೋಟಿಗೆ ಹೇಗೆ ಕಡಿಮೆಯಾಯಿತು ಎಂಬುದನ್ನು ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅರಿಯುವ ಪ್ರಯತ್ನ ಮಾಡಬೇಕು’ ಎಂದಿದ್ದಾರೆ.
‘ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ರಾಹುಲ್ ಗಾಂಧಿ ಅವರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರವು ತೆಲಂಗಾಣದ ರೈತರನ್ನು ಸಾಲದ ಹೆಸರಿನಲ್ಲಿ ವಂಚಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.