ADVERTISEMENT

ಮದುಮಗ ಯೋಧನನ್ನು ಹೆಲಿಕಾಪ್ಟರ್‌ ಮೂಲಕ ಕರೆತಂದ ಬಿಎಸ್‌ಎಫ್‌

ಪಿಟಿಐ
Published 28 ಏಪ್ರಿಲ್ 2022, 11:38 IST
Last Updated 28 ಏಪ್ರಿಲ್ 2022, 11:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಮದುವೆ ನಿಗದಿಯಾಗಿದ್ದ ಯೋಧರೊಬ್ಬರನ್ನು ಅವರ ಹುಟ್ಟೂರಿಗೆ ತಲುಪಿಸುವ ಸಲುವಾಗಿ ಗಡಿ ಭದ್ರತಾ ಪಡೆಯು(ಬಿಎಸ್‌ಎಫ್‌) ಶ್ರೀನಗರದ ವರೆಗೆ ವಿಶೇಷ ಹೆಲಿಕಾಪ್ಟರ್ ಮೂಲಕ ಕರೆತಂದಿದೆ.

ಜಮ್ಮು– ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ಮಚಿಲ್‌ ವಲಯದ ಪರ್ವತ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 30 ವರ್ಷದ ಕಾನ್‌ಸ್ಟೆಬಲ್‌ ನಾರಾಯಣ ಬೆಹ್ರಾ ಅವರನ್ನು ಹೆಲಿಕಾಪ್ಟರ್ ಮೂಲಕ ಕರೆತರಲಾಗಿದೆ.

ನಾರಾಯಣ ಅವರ ಮದುವೆಯು ಕಾಶ್ಮೀರದಿಂದ 2,500 ಕಿ.ಮೀ. ದೂರದಲ್ಲಿರುವ ಒಡಿಶಾದ ಧೆನ್‌ಕನಲ್ ಜಿಲ್ಲೆಯ ಆದಿಪುರ ಗ್ರಾಮದಲ್ಲಿ ಮೇ 2ರಂದು ನಿಗದಿಯಾಗಿದೆ. ಅವರು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪ್ರದೇಶವು ಹಿಮದಿಂದ ಆವೃತವಾಗಿರುವುದರಿಂದ ಅಲ್ಲಿಂದ ಕಾಶ್ಮೀರ ಕಣಿವೆಗೆ ರಸ್ತೆ ಸಂಪರ್ಕವು ಸದ್ಯ ಕಡಿತಗೊಂಡಿದೆ. ವಾಯು ಮಾರ್ಗದ ಮೂಲಕವೇ ಅಲ್ಲಿಗೆ ಯೋಧರನ್ನು ಕರೆದೊಯ್ಯಲಾಗುತ್ತದೆ ಎಂದು ಬಿಎಸ್‌ಎಫ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ನಾರಾಯಣ ಅವರ ಪೋಷಕರು ಈಚೆಗೆ ಯೂನಿಟ್‌ ಕಮಾಂಡರ್‌ಗಳನ್ನು ಸಂಪರ್ಕಿಸಿ, ಮಗನ ಮದುವೆಗೆ ಎಲ್ಲಾ ತಯಾರಿ ನಡೆಸಲಾಗಿದೆ. ನಿಗದಿತ ದಿನಕ್ಕೆ ಆತನಿಗೆ ತಲುಪಲು ಸಾಧ್ಯವಾಗಲಿದೆಯೇ ಎಂಬುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಬಿಎಸ್‌ಎಫ್‌ ಇನ್‌ಸ್ಪೆಕ್ಟರ್ ಜನರಲ್‌ (ಕಾಶ್ಮೀರ ವಿಭಾಗ) ರಾಜ ಬಾಬು ಸಿಂಗ್‌ ಅವರ ಗಮನಕ್ಕೆ ತರಲಾಯಿತು. ಕೂಡಲೇ ಅವರು ಚೀತಾ ಹೆಲಿಕಾಪ್ಟರ್‌ ಮೂಲಕ ನಾರಾಯಣ ಅವರನ್ನು ಕರೆತರಲು ಆದೇಶಿಸಿದ್ದಾರೆ ಎಂದೂ ತಿಳಿಸಿದ್ದಾರೆ.

ನಾರಾಯಣ ಅವರನ್ನು ಗುರುವಾರ ಬೆಳಿಗ್ಗೆ ಹೆಲಿಕಾಪ್ಟರ್‌ ಮೂಲಕ ಶ್ರೀನಗರಕ್ಕೆ ಕರೆತರಲಾಗಿದ್ದು, ಈಗ ಅವರು ತಮ್ಮ ಊರಿನತ್ತ ಪ್ರಯಾಣಿಸುತ್ತಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.