ADVERTISEMENT

ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಎಸ್‌ಪಿಯಿಂದ ಡ್ಯಾನಿಶ್‌ ಅಲಿ ಅಮಾನತು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 16:46 IST
Last Updated 9 ಡಿಸೆಂಬರ್ 2023, 16:46 IST
ಡ್ಯಾನಿಶ್‌ ಅಲಿ –ಪಿಟಿಐ ಚಿತ್ರ
ಡ್ಯಾನಿಶ್‌ ಅಲಿ –ಪಿಟಿಐ ಚಿತ್ರ   

ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇರೆಗೆ ಸಂಸದ ಡ್ಯಾನಿಶ್ ಅಲಿ ಅವರನ್ನು ಬಹುಜನ ಸಮಾಜ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.

ಅಲಿ ಅವರು ಅಮ್ರೋಹಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಪಕ್ಷದ ಹಿತಾಸಕ್ತಿಗೆ ಧಕ್ಕೆ ತಂದ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಬಿಎಸ್‌ಪಿ ರಾಜ್ಯ ಘಟಕ ತಿಳಿಸಿದೆ.

ಅಮಾನತಿಗೆ ಕಾರಣವೇನು?: ಸಂಸತ್‌ ಅಧಿವೇಶನದಲ್ಲಿ ಶುಕ್ರವಾರ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಂಡಿಸಿದ ನಿರ್ಣಯ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದರು. ಬಿಎಸ್‌ಪಿಯ ಉಳಿದ ಸದಸ್ಯರು ಸದನದಲ್ಲಿ ಆಸೀನರಾಗಿದ್ದರೂ ಅಲಿ ಮಾತ್ರ ವಿಪಕ್ಷ ಸದಸ್ಯರ ನಡೆಯನ್ನು ಅನುಕರಿಸಿದ್ದರು. ಇದು ಪಕ್ಷದ ವಿರೋಧಿ ನಿಲುವಾಗಿದೆ ಎಂದು ಹೇಳಲಾಗಿದೆ.

ADVERTISEMENT

ಮಾಯಾವತಿ ನೇತೃತ್ವದ ಬಿಎಸ್‌ಪಿ ‘ಇಂಡಿಯಾ’ ಮೈತ್ರಿಕೂಟದಿಂದ ಅಂತರ ಕಾಯ್ದುಕೊಂಡಿದೆ. ಆದರೆ ಅಲಿ ಅವರು, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸುವ ವಿಪಕ್ಷ ಸದಸ್ಯರ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ.

‘ಪಕ್ಷದ ನೀತಿ, ಸೈದ್ಧಾಂತಿಕತೆ ಹಾಗೂ ಶಿಸ್ತು ಉಲ್ಲಂಘನೆ ಮಾಡದಂತೆ ಹಲವು ಬಾರಿ ನಿಮಗೆ ಮೌಖಿಕವಾಗಿ ಸೂಚಿಸಲಾಗಿದೆ. ಆದರೆ, ಅದನ್ನು ಉಲ್ಲಂಘಿಸಿದ್ದೀರಿ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು, ಅಲಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

2018ರ ವರೆಗೆ ಅಲಿ ಅವರು ಜೆಡಿಎಸ್‌ನ ಸದಸ್ಯರಾಗಿದ್ದ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

‘ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಮನವಿ ಮೇರೆಗೆ ಅಮ್ರೋಹಾ ಲೋಕಸಭಾ ಕ್ಷೇತ್ರದಿಂದ ನಿಮಗೆ ಬಿಎಸ್‌ಪಿ ಟಿಕೆಟ್‌ ನೀಡಲಾಗಿತ್ತು. ಪಕ್ಷದ ನೀತಿ ನಿಯಮ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಾರೆಂದು ದೇವೇಗೌಡ ಕೂಡ ಭರವಸೆ ನೀಡಿದ್ದರು. ಆದರೆ, ಎಲ್ಲಾ ಭರವಸೆಯನ್ನು ಉಲ್ಲಂಘಿಸಿದ್ದೀರಿ’ ಎಂದು ಹೇಳಿದ್ದಾರೆ.

ಬಿಎಸ್‌ಪಿ ಹಿತದೃಷ್ಟಿಯಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.