ಚೆನ್ನೈ: ತಮಿಳುನಾಡು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅರ್ಮ್‌ಸ್ಟ್ರಾಂಗ್ ಅವರನ್ನು ದುಷ್ಕರ್ಮಿಗಳ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿರುವ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜಾಣ ಮೌನ ವಹಿಸಿದ್ದಾರೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕಿಡಿಕಾರಿದ್ದಾರೆ.
ಅರ್ಮ್‌ಸ್ಟ್ರಾಂಗ್ ಹತ್ಯೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ತಮಿಳುನಾಡು ಬಿಎಸ್‌ಪಿ ಅಧ್ಯಕ್ಷ ದಲಿತರೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಕಲ್ಲಕುರಿಚ್ಚಿಯಲ್ಲಿ ನಡೆದ ವಿಷಯುಕ್ತ ಮದ್ಯ ಸೇವನೆ ದುರಂತದಂತೆಯೇ ಈ ಪ್ರಕರಣದಲ್ಲೂ ರಾಹುಲ್ ಗಾಂಧಿ ಅವರು ಮೌನಕ್ಕೆ ಶರಣಾಗುತ್ತಾರೆ ಎಂದು ನಿರೀಕ್ಷಿಸಬಹುದು. ಏಕೆಂದರೆ ತಮಿಳುನಾಡಿನಲ್ಲಿ ಡಿಎಂಕೆ ಮೇಲೆ ಕಾಂಗ್ರೆಸ್‌ನ ಅವಲಂಬಿತವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ನಿನ್ನೆ ಬಿಎಸ್‌ಪಿ ಮುಖಂಡರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ, ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಜನಸಾಮಾನ್ಯರ ಬದುಕಿಗೆ ಯಾವುದೇ ಗ್ಯಾರಂಟಿ ಇಲ್ಲ. ಅಕ್ರಮ ಮದ್ಯವು ನದಿಯಂತೆ ಹರಿಯುತ್ತಿದೆ. ವಿಷಯುಕ್ತ ಮದ್ಯ ಬಗ್ಗೆ ಧ್ವನಿ ಎತ್ತಲು ಯಾರಿಗೂ ಧೈರ್ಯವಿಲ್ಲ. ಯಾರಾದರೂ ಧ್ವನಿ ಎತ್ತಿದರೆ ಅವರಿಗೆ ಜೀವ ಬೆದರಿಕೆ ಹಾಕಲಾಗುತ್ತದೆ’ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಆರೋಪಿಸಿದ್ದಾರೆ.
ಪೆರಂಬೂರ್‌ನಲ್ಲಿರುವ ಅರ್ಮ್‌ಸ್ಟ್ರಾಂಗ್ ಅವರ ಮನೆಯ ಬಳಿಯೇ ಕೃತ್ಯ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಅರ್ಮ್‌ಸ್ಟ್ರಾಂಗ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಶಂಕಿತರನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.