ನವದೆಹಲಿ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (ಇಗ್ನೊ) 2011–12ನೇ ಶೈಕ್ಷಣಿಕ ಅವಧಿಯೊಳಗೆ ಪಡೆದ ಬಿ.ಟೆಕ್ ಮತ್ತು ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಪದವಿಗಳು ಮಾತ್ರ ಮಾನ್ಯತೆ ಹೊಂದಿವೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಹೇಳಿದೆ.
ಇಗ್ನೊ ದೂರಶಿಕ್ಷಣದ ಮೂಲಕ ಈ ಎರಡು ಕೋರ್ಸ್‌ಗಳನ್ನು ನಡೆಸುತ್ತಿದೆ. ಆದರೆ, ಇಗ್ನೊ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನದಂಡಗಳನ್ನು ಉಲ್ಲಂಘಿಸುತ್ತಿದೆ. ತಾಂತ್ರಿಕ ಶಿಕ್ಷಣವನ್ನು ದೂರಶಿಕ್ಷಣದ ಮೂಲಕ ನೀಡಲು ಸಾಧ್ಯವಿಲ್ಲ ಎಂದು ಯುಜಿಸಿ ಹೇಳಿದ ನಂತರ ಇಗ್ನೊ ಈ ಎರಡು ಕೋರ್ಸ್‌ಗಳನ್ನು ನಿಲ್ಲಿಸಿದೆ. ಈ ಕೋರ್ಸ್‌ಗಳ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ.
‘ಇಗ್ನೊದಿಂದ 2009–10ರ ಶೈಕ್ಷಣಿಕ ಅವಧಿವರೆಗೆ ನೋಂದಣಿಯಾದ ಬಿ.ಟೆಕ್, ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಪದವಿ ಮಾತ್ರ ಮಾನ್ಯತೆ ಹೊಂದಿರುತ್ತದೆ’ ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಆದರೆ, 2010–11 ಮತ್ತು 2011–12ರ ಶೈಕ್ಷಣಿ ಅವಧಿಯ ಮೇಲಿನ ಎರಡು ಕೋರ್ಸ್‌ಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, 2011–12ರ ಶೈಕ್ಷಣಿಕ ಅವಧಿಯ ಬ್ಯಾಚ್ ಈ ಕೋರ್ಸ್‌ಗಳ ಕೊನೆಯ ಬ್ಯಾಚ್ ಆಗಿದೆ. 2011–12 ಅವಧಿಯೊಳಗೆ ಪಡೆದ ಪದವಿಗೆ ಮಾತ್ರ ಮಾನ್ಯತೆ ಇದೆ’ ಎಂದು ಅಧೀನ ನ್ಯಾಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.