ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಪದ್ಮ ಪ್ರಶಸ್ತಿ ತಿರಸ್ಕರಿಸಿದ ಮೊದಲ ಕಮ್ಯೂನಿಸ್ಟ್ ನಾಯಕರಲ್ಲ. ಪದ್ಮ ಪ್ರಶಸ್ತಿ ತಿಸ್ಕರಿಸಿದವರಲ್ಲಿ ದಿವಂಗತ ಸಿಪಿಐ (ಎಂ) ಮಾಜಿ ನಾಯಕ ಇ.ಎಂ.ಎಸ್. ನಂಬೂದಿರಿಪಾಡ್ ಮೊದಲಿಗರಾಗಿದ್ದಾರೆ.
ಸಿಪಿಐ (ಎಂ) ನಾಯಕರು ಸಿದ್ಧಾಂತಕ್ಕೆ ಅನುಗುಣವಾಗಿ ರಾಷ್ಟ್ರದ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ. ಪದ್ಮ ಭೂಷಣಕ್ಕೆ ಆಯ್ಕೆಯಾಗಿರುವ ಕಾಮ್ರೇಡ್ ಬುದ್ಧದೇವ್ ಭಟ್ಟಾಚಾರ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ರಾಷ್ಟ್ರದಿಂದ ಅಂತಹ ಪ್ರಶಸ್ತಿಗಳನ್ನು ನಿರಾಕರಿಸುವಲ್ಲಿ ಸಿಪಿಐ(ಎಂ) ನೀತಿಗೆ ಬದ್ಧವಾಗಿದೆ. ನಮ್ಮ ಕೆಲಸ ಪ್ರಶಸ್ತಿಗಾಗಿ ಅಲ್ಲ, ಜನರಿಗಾಗಿ! ಈ ಹಿಂದೆ ಕಾಮ್ರೇಡ್ ಇ.ಎಂ.ಎಸ್ ಪ್ರಶಸ್ತಿಯನ್ನು ನಿರಾಕರಿಸಿದ್ದರು ಎಂದು ಸಿಪಿಐ (ಎಂ) ಪ್ರಕಟಣೆಯಲ್ಲಿ ತಿಳಿಸಿದೆ.
'ನನಗೆ ಪದ್ಮಭೂಷಣದ ಬಗ್ಗೆ ಏನೂ ತಿಳಿದಿಲ್ಲ. ಯಾರೂ ನನಗೆ ಅದರ ಬಗ್ಗೆ ಹೇಳಿಲ್ಲ. ಅವರು ನಿಜವಾಗಿಯೂ ಪದ್ಮ ಭೂಷಣ ನೀಡಿದ್ದರೆ ನಾನು ಅದನ್ನು ತಿರಸ್ಕರಿಸುತ್ತೇನೆ' ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
1992ರಲ್ಲಿ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಜೊತೆಗೆ ಕೇರಳದ ಮಾಜಿ ಮುಖ್ಯಮಂತ್ರಿ ಆಗಿರುವ ಇ.ಎಂ.ಎಸ್. ನಂಬೂದಿರಿಪಾಡ್ ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ವಾಜಪೇಯಿ ಪ್ರಶಸ್ತಿಯನ್ನು ಸ್ವೀಕರಿಸಿದರೆ ಇ.ಎಂ.ಎಸ್ ನಿರಾಕರಿಸಿದ್ದರು.
ಈ ಹಿಂದೆ ರಾಜಕೀಯ ಸಲಹೆಗಾರ ಪಿ.ಎನ್. ಹಕ್ಸರ್ ಕೂಡಾ ದೇಶದ ಎರಡನೇ ಅತ್ಯುನ್ನತ್ತ ನಾಗರಿಕ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಸಾಮಾಜಿಕ ಕೆಲಸಕ್ಕಾಗಿ ಪ್ರಶಸ್ತಿ ಸ್ವೀಕರಿಸುವುದಕ್ಕೆ ಅವರ ವಿರೋಧವಿತ್ತು.
2020ರಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಲುವಾಗಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಕೂಡ ಪದ್ಮ ವಿಭೂಷಣ ಪ್ರಶಸ್ತಿಯನ್ನು ನಿರಾಕರಿಸಿದ್ದರು.
ಪದ್ಮ ಭೂಷಣ ಪ್ರಶಸ್ತಿ ವಿಚಾರಕ್ಕೆ ಬಂದಾಗ 12 ಜನರು ಸ್ವೀಕರಿಸಲು ನಿರಾಕರಿಸಿದರೆ ಏಳು ಮಂದಿ ಪ್ರತಿಭಟನೆಯ ಭಾಗವಾಗಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.
ಇತಿಹಾಸಕಾರ ರೊಮಿಲಾ ಥಾಪರ್ ಎರಡು ಬಾರಿ ಮತ್ತು ಸಮಾಜ ಸೇವಕ ಕೆ. ಸುಬ್ರಹ್ಮಣ್ಯಂ ಅವರು ಒಂದು ಬಾರಿ ನಿರಾಕರಿಸಿದ್ದಾರೆ. ಅಧಿಕಾರಿಗಳು ಮತ್ತು ಪತ್ರಕರ್ತರು ಸರ್ಕಾರದಿಂದ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂಬುದು ಅವರ ನಿಲುವಾಗಿತ್ತು.
1975ರ ತುರ್ತು ಪರಿಸ್ಥಿತಿಯ ವಿರುದ್ಧ ಪ್ರತಿಭಟನೆಯ ಭಾಗವಾಗಿ ಕನ್ನಡ ಸಾಹಿತಿ ಕೆ. ಶಿವರಾಮ ಕಾರಂತರು ಪದ್ಮ ಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು. 2014ರಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಅವರ ಕುಟುಂಬ ಪದ್ಮಭೂಷಣವನ್ನು ನಿರಾಕರಿಸಿತು.
ಆಪರೇಷನ್ ಬ್ಲೂಸ್ಟಾರ್ ವಿರೋಧಿಸಿ ಕುಷ್ವಂತ್ ಸಿಂಗ್, ಪದ್ಮ ಭೂಷಣವನ್ನು ಹಿಂದಿರುಗಿಸಿದ್ದರು. ಬಳಿಕ 2007ರಲ್ಲಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
ಬಾಲಿವುಡ್ ಚಿತ್ರಕಥೆಗಾರ ಸಲೀಂ ಖಾನ್, ಲೇಖಕಿ ಗೀತಾ ಮೆಹ್ತಾ ಸೇರಿದಂತೆ ಸುಮಾರು 18 ಜನರು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಹಾಗೆಯೇ ಕವಿಗಳಾದ ಕೈಫಿ ಅಜ್ಮಿ, ಜಯಂತ ಮಹಾಪಾತ್ರ ಸೇರಿದಂತೆ 10 ಮಂದಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.