ಬೆಂಗಳೂರು:ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹5 ಲಕ್ಷದವರೆಗೆ ವಿಸ್ತರಣೆ ಮಾಡಲಾಗಿದೆ. ಆದರೂ ನೀವು ₹10 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿದ್ದರೂ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ! ಹೇಗೆ ಗೊತ್ತೇ?
ಈ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿ ಜೊತೆಗೆ ಸೆಕ್ಷನ್ 87ಎ ಅನ್ವಯ ಆದಾಯ ತೆರಿಗೆಗೆ ನೀಡಲಾಗುವ ಕಡಿತವನ್ನೂ (ರಿಬೇಟ್) ₹2,500ರಿಂದ ₹12,500ಕ್ಕೆ ವಿಸ್ತರಿಸಲಾಗಿದೆ.ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನೂ ₹40,000ದಿಂದ ₹50,000ಕ್ಕೆ ವಿಸ್ತರಿಸಲಾಗಿದೆ.
ತೆರಿಗೆಯ ಸ್ತರದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ₹5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಈ ಹಿಂದಿನ ಸ್ತರದಲ್ಲೇ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ₹5 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಸ್ಟ್ಯಾಂಡರ್ಡ್ ಡಿಡಕ್ಷನ್, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ಹೂಡಿಕೆ, ಗೃಹ ಸಾಲದ ಬಡ್ಡಿ, ಆರೋಗ್ಯ ವಿಮೆ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ಉದಾಹರಣೆಗೆ: ₹10 ಲಕ್ಷ ವಾರ್ಷಿಕ ಆದಾಯವಿದೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ₹50,000ವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆಯಬಹುದು. ಸೆಕ್ಷನ್ 80ಸಿ ಅನ್ವಯ ₹1.5 ಲಕ್ಷಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ₹2 ಲಕ್ಷದವರೆಗೆ ಗೃಹ ಸಾಲದ ಬಡ್ಡಿ ಮೇಲೆ ವಿನಾಯಿತಿ, ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದ್ದಕ್ಕೆ ₹50,000ದವರೆಗೆ ತೆರಿಗೆ ವಿನಾಯಿತಿ ದೊರೆಯಲಿದೆ. ಆರೋಗ್ಯ ವಿಮೆಗೂ₹50,000ದವರೆಗೆ ತೆರಿಗೆ ವಿನಾಯಿತಿ ಪಡೆಯಲೂ ಅವಕಾಶವಿದೆ. ಇಲ್ಲಿಗೆ ₹5 ಲಕ್ಷ ಆಯಿತು.
ಇನ್ನುಳಿದ ₹5 ಲಕ್ಷಕ್ಕೆ ₹12,500 ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ಸದ್ಯಸೆಕ್ಷನ್ 87ಎ ಅನ್ವಯ ಆದಾಯ ತೆರಿಗೆಗೆ ನೀಡಲಾಗುವ ಕಡಿತವನ್ನು (ರಿಬೇಟ್) ₹2,500ರಿಂದ ₹12,500ಕ್ಕೆ ವಿಸ್ತರಿಸಿರುವುದರಿಂದ ಈ ತೆರಿಗೆಗೂ ವಿನಾಯಿತಿ ದೊರೆಯಲಿದೆ. ಇಲ್ಲಿಗೆ ₹10 ಲಕ್ಷ ವಾರ್ಷಿಕ ಆದಾಯವಿದ್ದರೂ ತೆರಿಗೆಯಿಂದ ವಿನಾಯಿತಿ ಪಡೆಯಲು ಸಾಧ್ಯವಿದೆ ಎಂದು ಫಿನ್‌ಸೇಫ್ ಸಂಸ್ಥಾಪಕ ಮ್ರಿನ್ ಅಗರ್‌ವಾಲ್ ಲೆಕ್ಕಾಚಾರವನ್ನು ಉಲ್ಲೇಖಿಸಿ ಮನಿಕಂಟ್ರೋಲ್ ಸುದ್ದಿತಾಣ ವರದಿ ಮಾಡಿದೆ.
ವಾರ್ಷಿಕ ವೇತನ | ₹10 ಲಕ್ಷ |
ಸೆಕ್ಷನ್ 80ಸಿ ವಿನಾಯಿತಿ | ₹1.5 ಲಕ್ಷ |
ಸ್ಟ್ಯಾಂಡರ್ಡ್ ಡಿಡಕ್ಷನ್ | ₹50 ಸಾವಿರ |
ಗೃಹ ಸಾಲದ ಬಡ್ಡಿ ಮೇಲಿನ ವಿನಾಯಿತಿ | ₹2 ಲಕ್ಷ |
ಎನ್‌ಪಿಎಸ್ ಹೂಡಿಕೆ ವಿನಾಯಿತಿ | ₹50 ಸಾವಿರ |
ಆರೋಗ್ಯ ವಿಮೆವಿನಾಯಿತಿ | ₹50 ಸಾವಿರ |
ತೆರಿಗೆ ಪಾವತಿಸಬೇಕಾದ ಮೊತ್ತ | ₹5 ಲಕ್ಷ |
ಪಾವತಿಸಬೇಕಾದ ತೆರಿಗೆ | ₹12,500 |
87ಎ ಅನ್ವಯ ದೊರೆಯುವ ವಿನಾಯಿತಿ | ₹12,500 |
ತೆರಿಗೆ | ₹0 |
ಬಜೆಟ್ ಸಂಬಂಧಿತ ಇನ್ನಷ್ಟು ಸುದ್ದಿಗಳು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.