ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ₹ 7.43 ಲಕ್ಷ ಕೋಟಿ ಸಂಗ್ರಹಿಸುವುದಾಗಿ ಬಜೆಟ್‌ನಲ್ಲಿ ಅಂದಾಜಿಸಲಾಗಿತ್ತು.ಆದರೆ, ಪರಿಷ್ಕೃತ ಅಂದಾಜಿನಲ್ಲಿ₹ 6.43 ಲಕ್ಷ ಕೋಟಿಗೆ ತಗ್ಗಿಸಲಾಗಿದೆ.
10 ತಿಂಗಳಿನಲ್ಲಿ (ಏಪ್ರಿಲ್–ಜನವರಿ) ಕೇಂದ್ರ ಮತ್ತು ರಾಜ್ಯಗಳ ಜಿಎಸ್‌ಟಿ ಸಂಗ್ರಹ ₹ 9.71 ಲಕ್ಷ ಕೋಟಿಯಷ್ಟಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ತಿಂಗಳ ಸರಾಸರಿ ಜಿಎಸ್‌ಟಿ ಸಂಗ್ರಹ ₹ 89,700 ಕೋಟಿಯಿಂದ ₹ 97,100 ಕೋಟಿಗೆ ಏರಿಕೆಯಾಗಿದೆ.
ವಿನಾಯ್ತಿ ಮತ್ತು ಕಡಿತದ ಹೊರತಾಗಿಯೂ ವರಮಾನ ಸಂಗ್ರಹ ಉತ್ತೇಜನಕಾರಿಯಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ.
2019–20ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿಯಿಂದ ₹ 7.61 ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿದೆ.
ಬಡವರು ಮತ್ತು ಮಧ್ಯಮ ವರ್ಗ ಬಳಸುತ್ತಿರುವಬಹುತೇಕ ಅಗತ್ಯ ವಸ್ತುಗಳಲ್ಲಿ ಕೆಲವು ಶೂನ್ಯ ತೆರಿಗೆಯಲ್ಲಿದ್ದರೆ, ಇನ್ನೂ ಕೆಲವು ಶೇ 5 ರ ತೆರಿಗೆಯಲ್ಲಿವೆ.
**
ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಶೇ 3.3ರಷ್ಟು ಅಂದಾಜು ಮಾಡಲಾಗಿತ್ತು. ಆದರೆ, ಶೇ 3.4ಕ್ಕೆ ಅಲ್ಪ ಏರಿಕೆಯಾಗಲಿದೆ ಎಂದು ಹಣಕಾಸು ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
‘ರೈತರ ವರಮಾನ ಹೆಚ್ಚಿಸುವ ಉದ್ದೇಶದಿಂದ 2018–19ರಲ್ಲಿ ₹ 20 ಸಾವಿರ ಕೋಟಿ ಹಾಗೂ ₹ 2019–20ರಲ್ಲಿ ₹ 75 ಸಾವಿರ ಕೋಟಿ ನೀಡಲಾಗಿದೆ. ಇದನ್ನು ಬಿಟ್ಟರೆ ಶೇ 3.3ಕ್ಕಿಂತಲೂ ಕಡಿಮೆಯಾಗಲಿದೆ. ಏಳು ವರ್ಷಗಳ ಹಿಂದೆ ಶೇ 6ರಷ್ಟಿದ್ದ ವಿತ್ತೀಯ ಕೊರತೆಯನ್ನು ಶೇ 3.4ಕ್ಕೆ ತಗ್ಗಿಸಿರುವುದು ಗಮನಾರ್ಹ ವಿಷಯ’ ಎಂದಿದ್ದಾರೆ.
2018–19ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ವಿತ್ತೀಯ ಕೊರತೆ ಅಂತರವು ಬಜೆಟ್ ಅಂದಾಜಿನ ಶೇ 95.3ರಷ್ಟಾಗಿದೆ. ವರಮಾನ ಸಂಗ್ರಹದಲ್ಲಿ ನಿಧಾನಗತಿಯ ಬೆಳವಣಿಗೆಯಿಂದಾಗಿ ವಿತ್ತೀಯ ಕೊರತೆ ಅಂತರ ಹಿಗ್ಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನಶೇ 91.3ರಷ್ಟಿತ್ತು.
ಮೌಲ್ಯದ ಲೆಕ್ಕದಲ್ಲಿ 2018–19ನೇ ಹಣಕಾಸು ವರ್ಷಕ್ಕೆ₹6.24 ಲಕ್ಷ ಕೋಟಿಯಷ್ಟು ವಿತ್ತೀಯ ಕೊರತೆಯ ಗುರಿ ಇಟ್ಟುಕೊಳ್ಳಲಾಗಿದೆ.
ಆದರೆ, ಮೊದಲಾರ್ಧದಲ್ಲಿಯೇ₹5.94 ಲಕ್ಷ ಕೋಟಿಗೆ ತಲುಪಿದೆ. ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಣ ಅಂತರವೇ ವಿತ್ತೀಯ ಕೊರತೆಯಾಗಿದೆ.
2019–20ನೇ ಹಣಕಾಸು ವರ್ಷಕ್ಕೂ ಶೇ 3.4ರಷ್ಟು ವಿತ್ತೀಯ ಕೊರತೆ ನಿರೀಕ್ಷಿಸಲಾಗಿದೆ.
2019–20ರಲ್ಲಿ ಸರಾಸರಿ ತೆರಿಗೆ ವರಮಾನವು ದೇಶದ ಒಟ್ಟಾರೆ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 12.1 ರಷ್ಟಿರುವ ಅಂದಾಜು ಮಾಡಲಾಗಿದೆ. 2020–21ರಲ್ಲಿ ಶೇ 12.2ಕ್ಕೆ ಏರಿಕೆಯಾಗಲಿದೆ ಎಂದು ಸರ್ಕಾರ ಹೇಳಿದೆ.
ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ
ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಒದಗಿಸಲು ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ (ಪಿಎಂಎಸ್‌ಐಎಂ) ಯೋಜನೆ ಘೋಷಿಸಲಾಗಿದೆ. ಈ ಯೋಜನೆಯಂತೆ ಕಾರ್ಮಿಕರಿಗೆ ಪ್ರತಿ ತಿಂಗಳು ₹3000 ವನ್ನು 60 ವರ್ಷದ ನಂತರ ನೀಡಲಾಗುತ್ತದೆ. ಕಾರ್ಮಿಕರು ಪ್ರತಿ ತಿಂಗಳು ಇದಕ್ಕಾಗಿ ₹100 ಪಾವತಿಸಬೇಕಾಗುತ್ತದೆ. ಇಷ್ಟೇ ಮೊತ್ತವನ್ನು ಸರ್ಕಾರ ಪಾವತಿ ಮಾಡುತ್ತದೆ.
ಈ ಯೋಜನೆ ಮುಂದಿನ 5 ವರ್ಷಗಳಲ್ಲಿ 10ಕೋಟಿ ಕಾರ್ಮಿಕರಿಗೆ ನೆರವಾಗಲಿದೆ. ಇದರಿಂದಾಗಿ ವಿಶ್ವದ ಅತಿದೊಡ್ಡ ಪಿಂಚಣಿ ಯೋಜನೆ ಇದಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.