ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಬಿಹಾರಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಜೆಡಿಯು, ಈ ಅಭಿವೃದ್ಧಿ ಕ್ರಮಗಳು ಬಿಹಾರವನ್ನು ಆತ್ಮನಿರ್ಭರ ರಾಜ್ಯವನ್ನಾಗಿ ಮಾಡುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದಿದೆ.
2024–25ನೇ ಆರ್ಥಿಕ ವರ್ಷದ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದರು. ಈ ವೇಳೆ ಬಿಹಾರದ ವಿವಿಧ ರಸ್ತೆ ಕಾಮಗಾರಿಗಳಿಗೆ ₹26 ಸಾವಿರ ಕೋಟಿ ಮತ್ತು ಪ್ರವಾಹ ತಗ್ಗಿಸುವ ಕ್ರಮಗಳಿಗೆ ₹11,500 ಕೋಟಿ ಅನುದಾನ ಘೋಷಿಸಿದರು.
‘ರಾಜ್ಯದಲ್ಲಿ ಹೊಸ ವಿಮಾನ ನಿಲ್ದಾಣ ಮತ್ತು ವೈದ್ಯಕೀಯ ಕಾಲೇಜು ಜೊತೆಗೆ ಗಂಗಾ ನದಿಗೆ ಎರಡು ಹೊಸ ಸೇತುವೆಗಳನ್ನು ಘೋಷಿಸಲಾಗಿದೆ. ನಳಂದಾ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಪಡಿಸಲು ನಳಂದ-ರಾಜಗೀರ್ ಕಾರಿಡಾರ್ ಸೇರಿದಂತೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ’ ಎಂದು ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ ತಿಳಿಸಿದರು.
‘ಬಿಹಾರಕ್ಕೆ ಮೂರು ಹೊಸ ಎಕ್ಸ್‌ಪ್ರೆಸ್‌ವೇಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಬಿಹಾರದ ಸಂಪೂರ್ಣ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.