ಸಿರ್ಸಾ (ಹರಿಯಾಣ):ಬಿಡಾಡಿ ದನವೊಂದು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ತಿಂದಿರುವ ಘಟನೆ ಹರಿಯಾಣ ರಾಜ್ಯದಲ್ಲಿ ನಡೆದಿದೆ.
ಸಿರ್ಸಾ ನಿವಾಸಿ ಜನಕರಾಜ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಜನಕರಾಜ್ ಅವರ ಪತ್ನಿ ಹಾಗೂ ಸೊಸೆ ಚಿನ್ನದ ಅಭರಣಗಳನ್ನು ಬಿಚ್ಚಿ ತರಕಾರಿ ಹಾಕುವ ಡಬ್ಬಿಯಲ್ಲಿ ಹಾಕಿದ್ದಾರೆ. ನಂತರಅಡುಗೆ ಮಾಡಿದ ತ್ಯಾಜ್ಯ ತರಕಾರಿಯನ್ನು ಚಿನ್ನಾಭರಣ ಹಾಕಿದ್ದ ಡಬ್ಬಿಯಲ್ಲಿ ಹಾಕಿದ್ದಾರೆ. ಬಳಿಕ ಅದನ್ನು ಮನೆ ಮುಂದೆ ಇಡುವ ಕಸದ ಬುಟ್ಟಿಗೆ ಎಸೆದಿದ್ದಾರೆ.
ಈ ವೇಳೆ ಬೀದಿ ದನವೊಂದು ಬಂದು ಆ ವೇಸ್ಟ್ ತರಕಾರಿಯಲ್ಲಿ ಸೇರಿದ್ದ ಆಭರಣಗಳನ್ನು ತಿಂದಿದೆ. ಇದು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಪರಿಶೀಲಿಸಿದ ಜನಕರಾಜ್ ಆ ಬೀದಿ ದನವನ್ನು ಹುಡುಕಿ ತಂದುಮನೆಯ ಮುಂದೆ ಕಟ್ಟಿಹಾಕಿ, ನಂತರ ಪಶುವೈದ್ಯರಿಗೆ ಮಾಹಿತಿ ನೀಡಿದ್ದಾರೆ.
ದನದ ಸಗಣಿಯ ಮೂಲಕ ಆಭರಣಗಳನ್ನು ವಾಪಾಸು ಪಡೆಯುವ ವಿಶ್ವಾಸದಲ್ಲಿ ಜನಕರಾಜ್ ಇದ್ದಾರೆ. ಈ ಕಾರಣಕ್ಕಾಗಿಯೇ ಆ ಬೀದಿ ದನವನ್ನು ಮನೆಯ ಮುಂಭಾಗದಲ್ಲಿ ಕಟ್ಟಿ ಹಾಕಿ ಮೇವು ಹಾಕುತ್ತಿದ್ದು ನಿತ್ಯವೂ ಅದರ ಸಗಣಿಯನ್ನು ಪರೀಕ್ಷೆ ಮಾಡುತ್ತಿರುವುದಾಗಿ ಜನಕರಾಜ್ ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿ ಎನ್‌ಡಿಟಿವಿ ವರದಿ ಮಾಡಿದೆ.
ಆ ಬಿಡಾಡಿ ದನವನ್ನು ಗೋಶಾಲೆಗೆ ಬಿಟ್ಟರೆ ಮತ್ತೆ ಚಿನ್ನಾಭರಣ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಜನಕರಾಜ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.