ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯ ಪ್ರಮುಖ ಯೋಜನೆ 'ಬುಲೆಟ್ ರೈಲು' ಯಾವ ಹಂತದಲ್ಲಿದೆ? ಎಂದು ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹಮದ್ ಪ್ರಶ್ನಿಸಿದ್ದಾರೆ.
'ಮೋದಿ ಅವರು ಯೋಜನೆಗಳ ಬಗ್ಗೆ ವೈಭವಯುತವಾಗಿ ಘೋಷಣೆಗಳನ್ನು ಮಾಡುತ್ತಾರೆ. ಆದರೆ ಯಾವೊಂದನ್ನೂ ಸರಿಯಾಗಿ ಅನುಷ್ಠಾನ ಮಾಡುವುದಿಲ್ಲ' ಎಂದು ಡಾ. ಶಮಾ ಟ್ವೀಟ್ ಮೂಲಕ ಟೀಕಿಸಿದ್ದಾರೆ.
'ಮುಂದಿನ ಐದು ವರ್ಷಗಳಲ್ಲಿ ಜಪಾನ್ ₹3.2 ಲಕ್ಷ ಕೋಟಿಯನ್ನು ಭಾರತದಲ್ಲಿ ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಆದರೆ ಮೋದಿ ಸರ್ಕಾರದ ಮೊದಲ ಅವಧಿಯ 'ಬುಲೆಟ್ ರೈಲು ಯೋಜನೆ' ಯಾವ ಹಂತದಲ್ಲಿದೆ? ಮೋದಿ ಅವರು ಯೋಜನೆಗಳ ಬಗ್ಗೆ ಭಾರಿ ವೈವಭದ ಘೋಷಣೆ ಮಾಡುವುದನ್ನು ಇಷ್ಟ ಪಡುತ್ತಾರೆ. ಆದರೆ ಯಾವೊಂದನ್ನು ಸರಿಯಾಗಿ ಅನುಷ್ಠಾನಕ್ಕೆ ತರುವುದಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರು, 'ಮಹಾರಾಷ್ಟ್ರದಲ್ಲಿ ಭೂಸ್ವಾಧೀನ ವಿಳಂಬದಿಂದಾಗಿ ಬುಲೆಟ್ ರೈಲು ಯೋಜನೆ ತಡವಾಗುತ್ತಿದೆ. ಗುಜರಾತ್‌ನಲ್ಲಿ ಶೇ 95ರಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಕೇವಲ ಶೇ 23ರಷ್ಟು ಭೂಮಿಯನ್ನು ಮಾತ್ರ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿರುವುದು ಕಾಂಗ್ರೆಸ್ ಸರ್ಕಾರ. ಶಮಾ ಮೊಹಮ್ಮದ್ ಅವರು ಕಾಂಗ್ರೆಸ್ ವಕ್ತಾರರು' ಎಂದು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.