ಮುಂಬೈ: 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ವಿದ್ಯಾರ್ಥಿಗಳಿಗೆ ಇಲ್ಲಿನ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಕೆಲವು ಪ್ರಭಾವಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇವರನ್ನು ಹರಾಜಿಗೆ ಇಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಫೋಟೊ ಹಾಕಿದ್ದ ಆರೋಪ ಈ ಆ್ಯಪ್ ಮೇಲಿದೆ.
ಬಾಂದ್ರಾ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಕೆ.ಸಿ. ರಜಪೂತ್ ಅವರು ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಂಕ್ ಅಗರ್ವಾಲ್ ಅವರಿಗೆ ಜಾಮೀನು ನೀಡಿದ್ದಾರೆ. ಇದಕ್ಕೂ ಮುನ್ನ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು. ಪ್ರಕರಣ ಸಂಬಂಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಮೂವರು ಮತ್ತೆ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು.
ವಕೀಲ ಶಿವಂ ದೇಶಮುಖ್ ಮೂಲಕ ತಮ್ಮ ಜಾಮೀನು ಅರ್ಜಿಯನ್ನು ಸಲ್ಲಿಸಿದ ಝಾ, ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂಬ ಕಾರಣಕ್ಕಾಗಿ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯಗಳು ತಮ್ಮ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ ಎಂದು ಹೇಳಿದ್ದರು.
ಆ ಸಮಯದಲ್ಲಿ ನ್ಯಾಯಾಲಯ, ಅರ್ಜಿದಾರರಿಗೆ ತಾಂತ್ರಿಕ ಜ್ಞಾನವಿದೆ ಮತ್ತು ಆದ್ದರಿಂದ ಸಾಕ್ಷ್ಯವನ್ನು ನಾಶಪಡಿಸಬಹುದು ಎಂದು ತೀರ್ಪು ನೀಡಿತ್ತು. ಆದರೆ, ಇಂದು ಪೊಲೀಸರು ತಮ್ಮ ತನಿಖೆಯನ್ನು ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸಿರುವುದರಿಂದ ಪರಿಸ್ಥಿತಿ ಬದಲಾಗಿದೆ ಎಂದು ಝಾ ಜಾಮೀನು ಅರ್ಜಿಯಲ್ಲಿ ವಾದಿಸಿದ್ದಾರೆ.
ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಓಂಕಾರೇಶ್ವರ ಠಾಕೂರ್ ಮತ್ತು ನೀರಜ್ ಸಿಂಗ್ ಅವರ ಜಾಮೀನು ಅರ್ಜಿಯನ್ನು ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ. ವಿವರವಾದ ಜಾಮೀನು ಆದೇಶಗಳು ಇನ್ನೂ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.