ನವದೆಹಲಿ: ದೆಹಲಿ ಮುಖ್ಯಮಂತ್ರಿ ಆತಿಶಿ ಅವರನ್ನು ಅಧಿಕೃತ ನಿವಾಸದಿಂದ ‘ಬಲವಂತವಾಗಿ ಹೊರ ಹಾಕಲಾಗಿದೆ’ ಎಂಬ ಆರೋಪದ ಬೆನ್ನಲ್ಲೇ, ರಟ್ಟಿನ ಡಬ್ಬಗಳ ನಡುವೆ ಕುಳಿತು ಸಿ.ಎಂ ಕಡತಗಳನ್ನು ಪರಿಶೀಲಿಸುತ್ತಿರುವ ಚಿತ್ರವನ್ನು ಎಎಪಿ ಹಂಚಿಕೊಂಡಿದೆ.
‘ಎಕ್ಸ್’ ಜಾಲತಾಣದಲ್ಲಿ ಈ ಚಿತ್ರ ಹಂಚಿಕೊಂಡಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ‘ಜನರಿಗಾಗಿ ಕೆಲಸ ಮಾಡುವ ಆತಿಶಿ ಅವರ ಬದ್ಧತೆಯನ್ನು ಬದಲಿಸಲಾಗದು’ ಎಂದು ಪ್ರತಿಪಾದಿಸಿದ್ದಾರೆ. ನವರಾತ್ರಿ ಆಚರಣೆಯ ಸಂದರ್ಭದಲ್ಲೇ ಸಿ.ಎಂ ಅವರಿಗೆ ಸೇರಿದ್ದ ವಸ್ತುಗಳನ್ನು ಅವರ ನಿವಾಸದಿಂದ ‘ಹೊರಗೆ ಎಸೆಯಲಾಗಿದೆ’. ಈ ಮೂಲಕ ಮುಖ್ಯಮಂತ್ರಿಯವರ ನಿವಾಸ ಅತಿಕ್ರಮಿಸಲು ಯತ್ನಿಸಲಾಗಿದೆ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು, ‘ಇದು ದೆಹಲಿ ಜನತೆ ಮತ್ತು ಚುನಾಯಿತ ಮಹಿಳಾ ಮುಖ್ಯಮಂತ್ರಿ ಅವರಿಗೆ ಬಿಜೆಪಿಯು ಸಲ್ಲಿಸುವ ಗೌರವ. 27 ವರ್ಷದಿಂದ ಅಧಿಕಾರದಿಂದ ಹೊರಗಿರುವ ಬಿಜೆಪಿ ಈಗ ಸಿ.ಎಂ ನಿವಾಸವನ್ನು ಅತಿಕ್ರಮಿಸಲು ಮುಂದಾಗಿದೆ’ ಎಂದು ಟೀಕಿಸಿದರು.
ವಿಧಾನಸಭೆಯಲ್ಲಿ ತಾನು ಪ್ರತಿನಿಧಿಸುವ ಕಾಲ್ಕಜಿ ಕ್ಷೇತ್ರದ ನಿವಾಸಿ ಆಗಿರುವ ಆತಿಶಿ ಅವರಿಗೆ, ಅರವಿಂದ್ ಕೇಜ್ರಿವಾಲ್ ಸಂಪುಟದಲ್ಲಿ ಸಚಿವೆಯಾದ ಬಳಿಕ ಮಥುರಾ ರಸ್ತೆಯಲ್ಲಿ ನಿವಾಸ ಹಂಚಿಕೆ ಮಾಡಲಾಗಿತ್ತು.
ಫ್ಲಾಗ್‌ಸ್ಟಾಫ್ ರಸ್ತೆಯ ಬಂಗಲೆಯನ್ನು ಸುಪರ್ದಿಗೆ ಪಡೆದ ಕ್ರಮ ಕುರಿತಂತೆ ಬಿಜೆಪಿ ಮತ್ತು ಎಎಪಿ ನಡುವೆ ವಾಕ್ಸಮರ ನಡೆದಿದೆ. ಲೆಫ್ಟಿನೆಂಟ್ ಗವರ್ನರ್ ಅವರ ಸೂಚನೆಯಂತೆ ಈಗ ನಿವಾಸದಿಂದ ತೆರವುಗೊಳಿಸಲಾಗಿದೆ ಎಂದು ಎಎಪಿ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.