ADVERTISEMENT

ಲೋಕಸಭೆ ಚುನಾವಣೆಯಲ್ಲಿ ಬುರ್ಖಾಧಾರಿಗಳಿಂದ ನಕಲಿ ಮತದಾನ?: 2017ರ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:42 IST
Last Updated 9 ಮೇ 2019, 18:42 IST
   

‘ಬೇರೊಬ್ಬರ ಹೆಸರಿನಲ್ಲಿ ನಕಲಿ ಮತ ಚಲಾವಣೆ ಮಾಡುತ್ತಿದ್ದ ಬುರ್ಖಾಧಾರಿ ಮಹಿಳೆಯರ ಗುಂಪೊಂದನ್ನು ಗುರುತಿನ ಚೀಟಿಗಳ ಸಮೇತ ಬಿಜೆಪಿಯ ಮಹಿಳಾ ಕಾರ್ಯಕರ್ತೆಯೊಬ್ಬರು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ’ ಎಂಬ ಒಕ್ಕಣೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ.

ಚೌಕಿದಾರ್‌ ವಿ ಕೆ ಶರ್ಮಾ(Chowkidar V K SHARMA) ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಮೂಲಕ ಹಂಚಿಕೆಯಾಗಿರುವ ಈ ವಿಡಿಯೊ 3,200ಕ್ಕೂ ಹೆಚ್ಚು ಬಾರಿ ರೀಟ್ವೀಟ್‌ ಆಗಿದೆ. 3600ಕ್ಕೂ ಹೆಚ್ಚು ಟ್ವೀಟಿಗರುಮೆಚ್ಚಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ,‘ನಕಲಿ ಮತ ಚಲಾಯಿಸುತ್ತಿದ್ದ ಬುರ್ಖಾಧಾರಿ ಮುಸ್ಲಿಂ ಮಹಿಳೆಯರು ಉತ್ತರಪ್ರದೇಶದ ಮುಜಾಫಿರ್‌ನಗರದಲ್ಲಿ ಸಿಕ್ಕಿಬಿದ್ದಿದ್ದಾರೆ. ನೀವು ಮೋದಿ ಅವರಿಗೆ ಈ ರೀತಿಯಲ್ಲಿ ಪೆಟ್ಟುಕೊಡುತ್ತಿದ್ದೀರಾ? ಚುನಾವಣಾ ಆಯೋಗ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಮುಜಾಫಿರ್‌ ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂಜೀವ್‌ ಬಲ್ಯಾನ್‌ ನಕಲಿ ಮತದಾನದ ಬಗ್ಗೆ ಮಾತನಾಡಿದ್ದರು. ಏಪ್ರಿಲ್‌ 11ರಂದು ಮೊದಲ ಹಂತದ ಮತದಾನದ ವೇಳೆ ತಮ್ಮ ಹಕ್ಕು ಚಲಾಯಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ‘ಬುರ್ಖಾ ಧರಿಸಿರುವ ಮಹಿಳೆಯರ ಮುಖ, ಗುರುತಿನ ಪತ್ರಗಳನ್ನು ಪರಿಶೀಲಿಸುತ್ತಿಲ್ಲ. ಹೀಗಾಗಿ ಲೋಕಸಭೆ ಚುನಾವಣೆ ವೇಳೆ ನಕಲಿ ಮತ ಚಲಾವಣೆ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮರು ಮತದಾನಕ್ಕೆ ಆಗ್ರಹಿಸುತ್ತೇನೆ’ ಎಂದಿದ್ದರು. ಬಲ್ಯಾನ್‌ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಂತೆ ಅವರ ಬೆಂಬಲಿಗರು ಚಿತ್ರಗಳು ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ ಬುರ್ಖಾಧಾರಿ ಗಂಡಸರ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ADVERTISEMENT

ಆದರೆ, ಟ್ವಿಟರ್‌ ಸೇರಿದಂತೆ ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ನಲ್ಲಿಯೂ ಹರಿದಾಡುತ್ತಿವರುವ ವಿಡಿಯೊಗಳು ಈಗಿನವಲ್ಲ. ವಿಡಿಯೊ 2017ರದ್ದು. ಹಾಗೂ ಚಿತ್ರಗಳು ಬೇರೆಬೇರೆ ಸಂದರ್ಭಗಳಲ್ಲಿ ಸೆರೆಹಿಡಿದಿರುವುದು. ವೈರಲ್‌ ವಿಡಿಯೊದಲ್ಲಿರುವ ಮಹಿಳೆ 2017ರಲ್ಲಿ ರಾಮ್‌ಪುರ್‌ ನಗರ ಪಾಲಿಕೆಗೆ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶೈಲಾ ಖಾನ್‌.

ಸಂಜೀವ್‌ ಬಲ್ಯಾನ್‌ ಆರೋಪದ ಬಳಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ವಿಡಿಯೊಗಳ ಸತ್ಯಾಸತ್ಯತೆ ಕುರಿತು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಮಾಡಿದಾಗ ಈ ಅಂಶ ಬೆಳಕಿಗೆ ಬಂದಿದೆ.ಶೈಲಜಾ, ‘ನಾನು ಬಿಎಸ್‌ಪಿ ಅಭ್ಯರ್ಥಿ’ ಎಂದಿರುವುದು ವಿಡಿಯೊದಲ್ಲಿ ದಾಖಲಾಗಿದ್ದು,ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಆಗಿನನಗರ ಪಾಲಿಕೆ ಚುನಾವಣೆ ಸಂದರ್ಭದ ಪೋಸ್ಟರ್‌ಗಳೂ ಲಭ್ಯವಾಗಿವೆ. ಇದರಿಂದಾಗಿ ವಿಡಿಯೊದಲ್ಲಿರುವ ಮಹಿಳೆ ಬಿಜೆಪಿ ಕಾರ್ಯಕರ್ತೆಯಲ್ಲ ಬಿಎಸ್‌ಪಿ ಸದಸ್ಯೆ ಎಂಬುದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.