ಮರ್ಚುಲಾ (ಪಿಟಿಐ): ಉತ್ತರಾಖಂಡದ ಅಲ್ಮೋಡಾ ಜಿಲ್ಲೆಯ ಮರ್ಚುಲಾದಲ್ಲಿ ಸೋಮವಾರ ಖಾಸಗಿ ಬಸ್‌ವೊಂದು 200 ಮೀಟರ್ ಆಳದ ಕಂದಕ್ಕೆ ಉರುಳಿದ ಪರಿಣಾಮ 10 ಮಂದಿ ಮಹಿಳೆಯರು ಸೇರಿ ಒಟ್ಟು 36 ಪ್ರಯಾಣಿಕರು ಮೃತಪಟ್ಟಿದ್ದು, 24 ಮಂದಿಗೆ ಗಾಯಗಳಾಗಿವೆ.
24 ಗಾಯಾಳುಗಳು ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ ಎನ್ನಲಾಗುತ್ತಿದೆ. ‘ಗಾಡಿವಾಲಾ ಮೋಟರ್ ಓನರ್ ಅಸೋಸಿಯೇಷನ್’ ಎಂಬ ಖಾಸಗಿ ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು, ಎಲ್ಲ ಪ್ರಯಾಣಿಕರು ದೀಪಾವಳಿ ಹಬ್ಬದ ರಜೆ ಮುಗಿಸಿ ಉದ್ಯೋಗ ಸ್ಥಳಕ್ಕೆ ಮರಳುತ್ತಿದ್ದರು.
‘ಗಾಯಾಳುಗಳನ್ನು ರಾಮ್‌ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವ ನಾಲ್ವರಲ್ಲಿ ಮೂವರನ್ನು ಹೆಲಿಕಾಪ್ಟರ್ ಮೂಲಕವಾಗಿ ಏಮ್ಸ್‌ಗೆ ದಾಖಲಿಸಲಾಗಿದೆ. ಒಬ್ಬರನ್ನು ಹಲ್ದವಾನಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅಲ್ಮೋಡಾದ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿನೀತ್ ಪೌಲ್ ಮಾಹಿತಿ ನೀಡಿದರು.
‘ಗಾಡಿವಾಲಾ ಜಿಲ್ಲೆಯ ಪೌಡಿ ಎಂಬಲ್ಲಿಂದ ಕುಮಾವೊ ಜಿಲ್ಲೆಯ ರಾಮ್‌ನಗರಕ್ಕೆ ಬಸ್ ತೆರಳುತ್ತಿತ್ತು. ಪೌಡಿಯಿಂದ ರಾಮ್‌ನಗರಕ್ಕೆ 250 ಕಿ.ಮೀ ದೂರವಿದೆ. ಭಾನುವಾರ ರಾತ್ರಿ ಪೌಡಿಯಿಂದ ಬಸ್ ಹೊರಟಿತ್ತು. ಸೋಮವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ರಾಮ್‌ನಗರಕ್ಕೆ ಇನ್ನು 35 ಕಿ.ಮೀ ದೂರವಿತ್ತು’ ಎಂದರು.
ಕಂದಕವು ದಟ್ಟ ಮರಗಳಿಂದ ಹಾಗೂ ಬಂಡೆಗಳಿಂದ ಕೂಡಿತ್ತು. ಆದ್ದರಿಂದ, ಬಿದ್ದ ರಭಸಕ್ಕೆ ಬಸ್ ಸಂಪೂರ್ಣ ಜಖಂಗೊಂಡಿದೆ. ಕಂದಕದ ಬುಡದಲ್ಲಿ ನದಿಯೊಂದು ಹರಿಯುತ್ತದೆ. ನದಿಗೆ 10 ಮೀಟರ್ ದೂರದಲ್ಲಿ ಬಸ್ ಬಿದ್ದಿದೆ. ಅವಘಡದ ಕುರಿತು ತಿಳಿಯುತ್ತಿದ್ದಂತೆಯೇ ಸ್ಥಳೀಯರೇ ಮೊದಲು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ನಂತರ ಪೊಲೀಸರು, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಹಾಗೂ ಶೋಧ ಕಾರ್ಯದಲ್ಲಿ ತೊಡಗಿದರು.
ಅಪಘಾತ ಸಂಭವಿಸಿದ್ದು ಹೇಗೆ?
ಕಿರುದಾದ ತಿರುವಿನಲ್ಲಿ ಸಂಚರಿಸುತ್ತಿದ್ದ ವೇಳೆ ಮರವೊಂದಕ್ಕೆ ಬಸ್ ಗುದ್ದಿದೆ. ಮರಕ್ಕೆ ಗುದ್ದಿದ ರಭಸಕ್ಕೆ ಪ್ರಯಾಣಿಕರು ಬಸ್‌ನಿಂದ ಹಾರಿ ಬಿದ್ದಿದ್ದಾರೆ. ನಂತರ, ಕಂದಕ್ಕೆ ಉರುಳಿ ನದಿಯ ಹತ್ತಿರ ಬಸ್ ಬಿದ್ದಿದೆ. ‘ಸ್ಥಳದಲ್ಲಿಯೇ ಹಲವು ಪ್ರಯಾಣಿಕರು ಮೃತಪಟ್ಟಿದ್ದರು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ತನಿಖೆಗೆ ಆದೇಶ: ಪೌಡಿ ಹಾಗೂ ಅಲ್ಮೋಡಾದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೊತೆಗೆ, ಘಟನೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ.
43 ಸೀಟಿನ ಬಸ್‌ನಲ್ಲಿ 60 ಪ್ರಯಾಣಿಕರು!
‘ಖಾಸಗಿ ಬಸ್‌ನ ಸೀಟಿನ ಸಾಮರ್ಥ್ಯ 43 ಸೀಟುಗಳು. ಆದರೆ ಅವಘಡ ಸಂಭವಿಸಿದ ಸಂದರ್ಭದಲ್ಲಿ ಬಸ್‌ನಲ್ಲಿ 60 ಮಂದಿ ಪ್ರಯಾಣಿಕರು ಇದ್ದರು. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದುದೇ ಅವಘಡಕ್ಕೆ ಕಾರಣ ಇರಬಹುದು’ ಎಂದು ಅಲ್ಮೋಡಾದ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿನೀತ್ ಪೌಲ್ ಹೇಳಿದರು. ಮೂಲಗಳ ಪ್ರಕಾರ ‘ಕಂದಕ್ಕೆ ಉರುಳಿದ ಬಸ್ ಬಹಳ ಹಳೆಯದ್ದಾಗಿತ್ತು. ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವ ಸಾಮರ್ಥ್ಯ ಈ ಬಸ್‌ಗೆ ಇರಲಿಲ್ಲ’.
ಪರಿಹಾರ ಘೋಷಣೆ
ಘಟನೆ ಕುರಿತು ಖೇದ ವ್ಯಕ್ತಪಡಿಸಿದರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಮೃತ ಕುಟುಂಬಗಳಿಗೆ ₹4 ಲಕ್ಷ ಹಾಗೂ ಗಾಯಾಳುಗಳಿಗೆ ₹1 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಗಣ್ಯರ ಸಂತಾಪ
‘ಅಲ್ಮೋಡಾದಲ್ಲಿ ನಡೆದ ಅಪಘಾತದಲ್ಲಿ ಹಲವರು ಮೃತಪಟ್ಟಿರುವುದು ಹೃದಯ ವಿದ್ರಾವಕವಾದುದು. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ‘
–ದ್ರೌಪದಿ ಮುರ್ಮು ರಾಷ್ಟ್ರಪತಿ
‘ಇಂಥ ದುಃಖದ ಸಮಯದಲ್ಲಿ ಪಕ್ಷವು ಸಂತ್ರಸ್ತರ ಕುಟುಂಬದವರೊಂದಿಗೆ ನಿಲ್ಲುತ್ತದೆ. ಪಕ್ಷದ ಕಾರ್ಯಕರ್ತರು ಎಲ್ಲ ಸಹಕಾರ ಹಾಗೂ ಸೇವೆಯನ್ನು ಮಾಡಬೇಕು‘
–ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.