ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಬುಧವಾರ ಭೇಟಿ ಮಾಡಿದ್ದಾರೆ. ಸಿಧು ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ವದಂತಿ ಪಂಜಾಬ್ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವ ಸಿದ್ಧತೆಯ ಭಾಗವಾಗಿ ಈ ಭೇಟಿ ನಡೆದಿದೆ ಎಂದು ಮೂಲಗಳು ಹೇಳಿವೆ.
ಅಮರಿಂದರ್ ಸಿಂಗ್ ಸಚಿವ ಸಂಪುಟದ ಸದಸ್ಯರಾಗಿದ್ದ ಸಿಧು ಅವರು, 2018ರಲ್ಲಿ ಸಂಪುಟದಿಂದ ಹೊರನಡೆದಿದ್ದರು. 2018ರಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಧು ಭಾಗಿಯಾದ ಬಗ್ಗೆ ಇಬ್ಬರು ನಾಯಕರಲ್ಲೂ ಭಿನ್ನಾಭಿಪ್ರಾಯ ಮೂಡಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಮಾಡಲೂ ಸಿಧು ಅವರೇ ಕಾರಣ ಎಂದು ಅಮರಿಂದರ್ ಆರೋಪಿಸಿದ್ದರು. ಇದು ಇಬ್ಬರ ನಡುವಣ ಭಿನ್ನಾಭಿಪ್ರಾಯವನ್ನು ಹೆಚ್ಚಿಸಿತ್ತು. ಈಗ ಈ ಇಬ್ಬರೂ ನಾಯಕರು ಪರಸ್ಪರ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ನಾಲ್ಕು ತಿಂಗಳ ಅವಧಿಯಲ್ಲಿ ಇಬ್ಬರು ನಾಯಕರು ಭೇಟಿ ಮಾಡುತ್ತಿರುವುದು ಇದು ಎರಡನೇ ಬಾರಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರೈತರನ್ನು ಬೆಂಬಲಿಸಿ ಪಂಜಾಬ್‌ನಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡಿದ್ದಾಗ, ಅಮರಿಂದರ್ ಮತ್ತು ಸಿಧು ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಈ ಭೇಟಿಯನ್ನು ಆಯೋಜಿಸಿದ್ದರು. ಬುಧವಾರದ ಭೇಟಿಯ ಹಿಂದೆಯೂ ರಾವತ್ ಅವರ ಶ್ರಮವಿದೆ ಎಂದು ಮೂಲಗಳು ಹೇಳಿವೆ.
ಬುಧವಾರ ಮಧ್ಯಾಹ್ನಕ್ಕೆ ಇಬ್ಬರ ಭೇಟಿ ನಿಗದಿಯಾಗಿತ್ತು. ಆದರೆ ಅಮರಿಂದರ್ ಅವರು ಪ್ರಧಾನಿ ನರೇಂದ್ರ ಮೋದಿ ಜತೆಗೆ ವಿಡಿಯೊ ಸಂವಾದದಲ್ಲಿ ಇದ್ದ ಕಾರಣ, ಭೇಟಿಯು ಸಂಜೆ ವೇಳೆಗೆ ನಡೆಯಿತು. ಭೇಟಿಯ ವೇಳೆ ಏನನ್ನು ಚರ್ಚಿಸಲಾಯಿತು ಎಂಬುದನ್ನು ಇಬ್ಬರು ನಾಯಕರೂ ಬಹಿರಂಗಪಡಿಸಿಲ್ಲ. ಆದರೆ ಅಮರಿಂದರ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಭೇಟಿಯ ಚಿತ್ರವನ್ನು ಬಿಡುಗಡೆ ಮಾಡಿ, ‘ಇಬ್ಬರು ನಾಯಕರು ಇರುವ ಈ ಚಿತ್ರವು ಸಾವಿರಾರು ಪದಗಳಿಗೆ ಸಮ’ ಎಂದು ಹೇಳಿದ್ದಾರೆ.
ಸಿಧು ಅವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿ ಸ್ಥಾನವನ್ನೇ ನೀಡುವ ಸಾಧ್ಯತೆ ಅತ್ಯಧಿಕವಾಗಿದೆ. 2022ರ ಆರಂಭದಲ್ಲೇ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ ಜನಪ್ರಿಯತೆ ಹೊಂದಿರುವ ಸಿಧು ಮತ್ತು ಅಮರಿಂದರ್ ಸಿಂಗ್ ಮಧ್ಯೆ ಭೇಟಿ ನಡೆಯುವಂತೆ ಮಾಡುವಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರ ಒತ್ತಾಯವೂ ಇದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ನಾಯಕ ರಾಹುಲ್ ಗಾಂಧಿ ಅವರ ಜತೆ ನವಜೋತ್ ಸಿಂಗ್ ಸಿಧು ಅವರು ಉತ್ತಮ ಸಂಬಂಧ ಕಾಯ್ದುಕೊಂಡಿದ್ದಾರೆ. ಈ ಇಬ್ಬರು ನಾಯಕರೂ ಹಲವು ಸಂದರ್ಭದಲ್ಲಿ ಸಿಧು ಅವರನ್ನು ಬೆಂಬಲಿಸಿದ್ದರು. ಬುಧವಾರದ ಭೇಟಿ ನಡೆಯುವಲ್ಲಿ ಈ ಅಂಶವೂ ಪ್ರಭಾವ ಬೀರಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿಯಲ್ಲಿದ್ದ ಸಿಧು ಅವರು, ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಪಕ್ಷವನ್ನು ತೊರೆದಿದ್ದರು. ನಂತರ ಕಾಂಗ್ರೆಸ್ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.