ADVERTISEMENT

ಮಹಾರಾಷ್ಟ್ರ: ಮಹಿಳಾ ಕಾರಾಗೃಹದಲ್ಲಿ ಕೈದಿಗಳಿಗಾಗಿ FM ರೇಡಿಯೊ ಕೇಂದ್ರ ಆರಂಭ

ಪಿಟಿಐ
Published 25 ಡಿಸೆಂಬರ್ 2023, 5:57 IST
Last Updated 25 ಡಿಸೆಂಬರ್ 2023, 5:57 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ(ಮಹಾರಾಷ್ಟ್ರ): ಮುಂಬೈನ ಬೈಕುಲ್ಲಾ ಕಾರಾಗೃಹದಲ್ಲಿ ಕೈದಿಗಳಿಗಾಗಿ ಎಫ್​ಎಂ ರೇಡಿಯೊ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಜೈಲಿನ ಆವರಣದಲ್ಲಿ ಸ್ಥಾಪಿಸಲಾದ ಎಫ್‌ಎಂ ರೇಡಿಯೊ ಕೇಂದ್ರ ಉದ್ಘಾಟನೆಯ ನಂತರ ಶುಕ್ರವಾರ ಮಹಾರಾಷ್ಟ್ರದ ಜೈಲು ಇಲಾಖೆ ಮುಖ್ಯಸ್ಥ ಅಮಿತಾಬ್ ಗುಪ್ತಾ ಅವರು ಕೈದಿ ಶ್ರದ್ಧಾ ಚೌಗುಲೆ ಅವರನ್ನು ಸಂದರ್ಶಿಸಿದರು. ಸಂದರ್ಶನದಲ್ಲಿ ಚೌಗುಲೆ ಪ್ರಸ್ತುತ ಕೈದಿಗಳಿಗೆ ಒದಗಿಸುವ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ADVERTISEMENT

ಈ ಉಪಕ್ರಮವು ಕೈದಿಗಳಿಗೆ ಮನರಂಜನೆಯನ್ನು ಒದಗಿಸುವ ಗುರಿ ಹೊಂದಿದೆ. ಆದರೆ ಅವರಲ್ಲಿ ಕೆಲವರಿಗೆ ರೇಡಿಯೊ ಪ್ರಸಾರದ ಜ್ಞಾನವನ್ನು ಹೆಚ್ಚಿಸುವುದರ ಜತೆಗೆ ಭಕ್ತಿ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಜೈಲಿನೊಳಗೆ ಎಫ್‌ಎಂ ರೇಡಿಯೊ ಕೇಂದ್ರದ ಪರಿಕಲ್ಪನೆ ರಾಜ್ಯದಲ್ಲಿ ಹೊಸದೇನಲ್ಲ. ಪುಣೆಯ ಯರವಾಡ ಕೇಂದ್ರ ಕಾರಗೃಹ, ನಾಗ್ಪುರ ಕೇಂದ್ರ ಕಾರಗೃಹ, ಅಮರಾವತಿ ಕೇಂದ್ರ ಕಾರಗೃಹ ಹಾಗೂ ಕೊಲ್ಹಾಪುರ ಕೇಂದ್ರ ಕಾರಗೃಹಗಳಲ್ಲಿ ಇಂತಹ ಸೌಲಭ್ಯಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಆದರೆ ಮಹಿಳಾ ಕೈದಿಗಳಿಗೆ ಇದು ಮೊದಲನೆಯದು ಎಂದು ಅಧಿಕಾರಿ ತಿಳಿಸಿದ್ದಾರೆ.

'ಜೈಲು ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಯಾವಾಗಲೂ ಅಶಾಂತಿ ಇರುತ್ತದೆ. ಅಲ್ಲದೇ ಕುಟುಂಬ, ಭವಿಷ್ಯ ಮತ್ತು ಪ್ರಕರಣದ ಬಗ್ಗೆ ಆಲೋಚನೆಗಳು ಕೈದಿಗಳ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಯನ್ನು ಉಂಟುಮಾಡುತ್ತದೆ'. ಈ ಅಂಶಗಳನ್ನು ಇಟ್ಟುಕೊಂಡು, ಕೈದಿಗಳಿಗೆ ಸಕಾರಾತ್ಮಕತೆಯತ್ತ ಮಾರ್ಗದರ್ಶನ ನೀಡಲು ಬೈಕುಲ್ಲಾ ಮಹಿಳಾ ಜೈಲಿನಲ್ಲಿ ಎಫ್‌ಎಂ ರೇಡಿಯೊ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

ಇಲ್ಲಿ ಮಹಿಳಾ ಕೈದಿಗಳು ರೇಡಿಯೊ ಜಾಕಿಗಳಾಗಿ ಕೆಲಸ ಮಾಡುತ್ತಾರೆ. ಈ ಎಫ್‌ಎಂ ರೇಡಿಯೊ ಕೇಂದ್ರದ ಮೂಲಕ ಭಕ್ತಿಗೀತೆಗಳು, ಭಜನೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಬೇಡಿಕೆಯ ಮೇರೆಗೆ ಹಾಡುಗಳನ್ನು ಸಹ ಪ್ಲೇ ಮಾಡಲಾಗುವುದು ಎಂದು ಅಧಿಕಾರಿ ಹೇಳಿದರು.

ಶಿಕ್ಷೆಗೆ ಗುರಿಯಾದವರ ಸುಧಾರಣೆ ಜತೆಗೆ, ಮಹಿಳಾ ಕೈದಿಗಳಿಗೆ ರೇಡಿಯೊ ಜಾಕಿ ತರಬೇತಿ ನೀಡಲಾಗುವುದು. ಇದರಿಂದಾಗಿ ಅವರು ಜೈಲಿನಿಂದ ಬಿಡುಗಡೆಯಾದ ನಂತರ ಭವಿಷ್ಯದಲ್ಲಿ ಉದ್ಯೋಗಕ್ಕಾಗಿ ಕೌಶಲ್ಯಗಳನ್ನು ಪಡೆಯುತ್ತಾರೆ ಎಂದು ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.