ಕಾಸರಗೋಡು:ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಎಂ.ಸಿ. ಖಮರುದ್ದೀನ್ ಗೆಲುವು ಸಾಧಿಸಿದ್ದಾರೆ.
ಯುಡಿಎಫ್‌ಗೆಇಲ್ಲಿ ಗೆಲುವು ನಿರೀಕ್ಷಿತವಾಗಿದ್ದರೂ ಈ ಬಾರಿ ಬಹುಮತ ಜಾಸ್ತಿಯಾಗಿದೆ. ಖಮರುದ್ದೀನ್ ಅವರು 65, 407 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದು,ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿಕುಂಟಾರು 57484 ಮತಗಳನ್ನು ಗಳಿಸಿದ್ದಾರೆ. ಅದೇ ವೇಳೆ ಎಲ್‌ಡಿಎಫ್ ಅಭ್ಯರ್ಥಿ ಶಂಕರ ರೈ 38233 ಮತಗಳನ್ನು ಪಡೆದಿದ್ದಾರೆ.
2016ರಲ್ಲಿ89 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಯುಡಿಎಫ್ ಈ ಬಾರಿ 7923 ಮತಗಳ ಅಂತರದಿಂದ ಗೆದ್ದು ಬೀಗಿದೆ.
ಮಂಜೇಶ್ವರ ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಜಾಕ್ ಅವರ ನಿಧನದಿಂದಾಗಿ ತೆರವಾಗಿದ್ದ ಮಂಜೇಶ್ವರದ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಮತ್ತು ಎನ್‌ಡಿಎ ತೀವ್ರ ಪೈಪೋಟಿ ನಡೆಸಿದ್ದವು.ಎಡರಂಗ ಇಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿ ಬಂದಿದ್ದರೂ ಬಿಜೆಪಿಗೆ ಇಲ್ಲಿ ಭಾರೀ ಹೊಡೆತ ಸಿಕ್ಕಿದೆ.
2016ರಲ್ಲಿ ಯುಡಿಎಫ್ ಬೋಗಸ್ ಮತಗಳ ಸಹಾಯದಿಂದ ಗೆದ್ದಿದೆ ಎಂದು ಬಿಜೆಪಿ ಆರೋಪಿಸಿತ್ತು. ಒಂದು ವರ್ಷಗಳ ಕಾಲ ಮಂಜೇಶ್ವರದಲ್ಲಿ ಶಾಸಕರು ಇಲ್ಲದಂತೆ ಮಾಡಿದ ಬಿಜೆಪಿಗೆ ಈ ಬಾರಿ ಹೊಡೆತವುಂಟಾಗಲಿದೆ ಎಂದು ಮುಸ್ಲಿಂ ಲೀಗ್ ಚುನಾವಣಾ ಪ್ರಚಾರದಲ್ಲಿ ಹೇಳಿತ್ತು.
ಏತನ್ಮಧ್ಯೆ, ಶಬರಿಮಲೆ ವಿವಾದ ಮತ್ತು ಪೆರಿಯಾದಲ್ಲಿ ನಡೆದ ಅವಳಿ ಕೊಲೆಯನ್ನು ಯುಡಿಎಫ್ ಪ್ರಚಾರ ವಿಷಯವನ್ನಾಗಿ ಮಾಡಿದ್ದು ಎಡರಂಗಕ್ಕೆ ಹಿನ್ನಡೆಯಾಯಿತು.
ಉಪಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಸಿಗುತ್ತವೆ ಎಂಬ ನಿರೀಕ್ಷೆ ರಾಜ್ಯ ಬಿಜೆಪಿ ಘಟಕಕ್ಕಿತ್ತು. ಹಾಗಾಗಿಯೇ ಅಲ್ಲಿಗೆ ಪರಿಚಿತರಾಗಿರುವ ಅಭ್ಯರ್ಥಿ ರವೀಶ ತಂತ್ರಿಯನ್ನು ಬಿಜೆಪಿ ಆಯ್ಕೆ ಮಾಡಿತ್ತು. ಆದರೆ ಕಳೆದ ಬಾರಿ ಸಿಕ್ಕಿದ ಮತಗಳಿಗಿಂತ ಈ ಬಾರಿ ಮತಗಳು ಕಡಿಮೆಯಾಗಿರುವುದರಿಂದ ಇಲ್ಲಿ ಮತ ಸೋರಿಕೆ ನಡೆದಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಹೇಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.