ನವದೆಹಲಿ: ಕೇರಳ, ಮಹಾರಾಷ್ಟ್ರದಲ್ಲಿನ ಲೋಕಸಭೆಯ ತಲಾ ಒಂದು ಮತ್ತು ವಿವಿಧ 14 ರಾಜ್ಯಗಳ ವಿಧಾನಸಭೆಗಳ ಒಟ್ಟು 48 ಕ್ಷೇತ್ರಗಳಿಗೆ ನಡೆದ ಉಪ ಚನಾವಣೆಗಳಲ್ಲಿ ಬಹುತೇಕ ಆಡಳಿತ ಪಕ್ಷಗಳು ಗೆಲುವಿನ ನಗೆ ಬೀರಿವೆ.
ಹಾಲಿ ಸದಸ್ಯರ ರಾಜೀನಾಮೆ ಅಥವಾ ನಿಧನದಿಂದಾಗಿ ಈ ಸ್ಥಾನಗಳು ತೆರವಾಗಿದ್ದವು. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗಳ ಜೊತೆಗೆ ಈ ಕ್ಷೇತ್ರಗಳಿಗೂ ಚುನಾವಣೆ ನಡೆದಿದ್ದು, ಶನಿವಾರ ಮತಎಣಿಕೆ ನಡೆಯಿತು.
ಲೋಕಸಭೆ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಕ್ಷೇತ್ರ ಗೆದ್ದುಕೊಂಡರೆ, ವಿಧಾನಸಭೆಗಳ 48 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟವು 28, ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು 20 ಕ್ಷೇತ್ರಗಳಲ್ಲಿ ಜಯಗಳಿಸಿದವು.
ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿಸಿದ್ದರೆ, ಕಾಂಗ್ರೆಸ್‌ಗೆ ತುಸು ಸಮಾಧಾನ ನೀಡಿದೆ. ಆದರೆ, ಕಾಂಗ್ರೆಸ್‌ನ ಮೈತ್ರಿಪಕ್ಷಗಳಾದ ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳಿಗೆ ಕ್ರಮವಾಗಿ ಬಿಹಾರ, ಉತ್ತರ ಪ್ರದೇಶದಲ್ಲಿ ನಿರಾಸೆಯಾಗಿದೆ.ರಾಜಸ್ಥಾನದಲ್ಲಿಯೂ ‘ಇಂಡಿಯಾ’ ಮೈತ್ರಿಕೂಟ ನೀರಸ ಸ್ಪರ್ಧೆ ನೀಡಿತು.
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಗೆಲುವು ಸಾಧಿಸಿದರೆ, ಮಹಾರಾಷ್ಟ್ರದ ನಾಂದೇಡ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯು ಗೆಲುವಿನ ನಗೆ ಬೀರಿತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಂದೇಡ್ ಕ್ಷೇತ್ರವನ್ನು ಕಳೆದುಕೊಂಡಿದೆ.
ನಾಂದೇಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯ ವಸಂತ ಚವಾಣ್ ಅವರ ನಿಧನದಿಂದಾಗಿ ಉಪ ಚುನಾವಣೆ ನಡೆಯಿತು. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇತ್ತು. ಮೃತ ವಸಂತ ಚವಾಣ್ ಅವರ ಪುತ್ರ ರವೀಂದ್ರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.
ಬಿಜೆಪಿ ಅಭ್ಯರ್ಥಿ ಸಂತುಕ್‌ರಾವ್ ಹಂಬರ್ದೆ ಅವರು 12,283 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಚವಾಣ್ ವಿರುದ್ಧ ಗೆದ್ದರು. ಅಂತಿಮವಾಗಿ ಸಂತುಕ್‌ರಾವ್ ಹಂಬರ್ದೆ ಅವರು –– ಮತ, ಕಾಂಗ್ರೆಸ್‌ನ ರವೀಂದ್ರ ಚವಾಣ್ –– ಮತಗಳನ್ನು ಪಡೆದರು.
ವಿಧಾನಸಭೆಗಳ ವಿವಿಧ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಹುತೇಕ ಆಡಳಿತ ಪಕ್ಷಗಳು ಗೆಲುವಿನ ನಗೆ ಬೀರಿವೆ.
ಉತ್ತರ ಪ್ರದೇಶದಲ್ಲಿ 9 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಆಡಳಿತಾರೂಢ ಬಿಜೆಪಿಯು 6 ಕ್ಷೇತ್ರದಲ್ಲಿ ಗೆದ್ದಿದೆ. ಅಂತೆಯೇ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಎಲ್ಲ ಆರು ಕ್ಷೇತ್ರಗಳು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ರಾಜಸ್ಥಾನದಲ್ಲಿ ಏಳು ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿಯು ಐದು ಕ್ಷೇತ್ರಗಳು, ಕಾಂಗ್ರೆಸ್ ಮತ್ತು ಭಾರತ್ ಆದಿವಾಸಿ ಪಾರ್ಟಿ (ಬಿಎಪಿ) ತಲಾ ಒಂದು ಕ್ಷೇತ್ರದಲ್ಲಿ ಗೆದ್ದಿತು. ಈ ಏಳು ಕ್ಷೇತ್ರಗಳಲ್ಲಿ ಹಿಂದೆ ಕಾಂಗ್ರೆಸ್ ನಾಲ್ಕು, ಬಿಜೆಪಿ, ಆರ್‌ಎಲ್‌ಪಿ, ಬಿಎಪಿ ತಲಾ ಒಂದು ಕ್ಷೇತ್ರ ಗೆದ್ದಿದ್ದವು.
ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಉಪ ಚುನಾವಣೆ ನಡೆದ ಎಲ್ಲ 6 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಐದು ಸ್ಥಾನ ಉಳಿಸಿಕೊಳ್ಳುವ ಜೊತೆಗೆ, ಹಿಂದೆ ಬಿಜೆಪಿ ಅಭ್ಯರ್ಥಿ ಗೆದ್ದಿದ್ದ ಕ್ಷೇತ್ರದಲ್ಲೂ ಈ ಬಾರಿ ಗೆಲುವಿನ ನಗೆ ಬೀರಿದೆ.
ಅಸ್ಸಾಂನಲ್ಲಿ ಚುನಾವಣೆ ನಡೆದ ಐದು ಕ್ಷೇತ್ರಗಳಲ್ಲಿ ಎನ್‌ಡಿಎ ಗೆದ್ದಿದೆ. ಬಿಜೆಪಿ ಮೂರು ಕ್ಷೇತ್ರ, ಎನ್‌ಡಿಎ ಮೈತ್ರಿಪಕ್ಷಗಳಾದ ಅಸ್ಸಾಂ ಗಣ ಪರಿಷತ್ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ತಲಾ ಒಂದು ಕ್ಷೇತ್ರ ಗೆದ್ದುಕೊಂಡವು.
ರಾಜಸ್ಥಾನದಲ್ಲಿ ಏಳು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಿತು. ಆಡಳಿತಾರೂಢ ಬಿಜೆಪಿ ಐದು ಕ್ಷೇತ್ರದಲ್ಲಿ ಜಯಗಳಿಸಿದರೆ, ಕಾಂಗ್ರೆಸ್ ಮತ್ತು ಭಾರತ್ ಆದಿವಾಸಿ ಪಾರ್ಟಿ ತಲಾ ಒಂದು ಕ್ಷೇತ್ರದಲ್ಲಿ ಜಯಗಳಿಸಿವೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಬಲವು 119ಕ್ಕೆ ಏರಿದೆ.
ಪಂಜಾಬ್‌ನಲ್ಲಿ ನಾಲ್ಕು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಎಎಪಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿ ಭಗವಂತ ಮಾನ್ ನೇತೃತ್ವದ ಸರ್ಕಾರದ ಉತ್ಸಾಹ ಹೆಚ್ಚಿಸಿದೆ. ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿತು.
ಮೇಘಾಲಯದ ಗಂಬೆಗ್ರೆ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಂಗ್ಮಾ ಅವರ ಅವರ ಪತ್ನಿ ಮೆಹ್ತಾಬ್ ಚಾಂಡೀ ಅಗಿಟೊಕ್ ಸಂಗ್ಮಾ ಜಯಗಳಿಸಿದರು.
ಸಂಸತ್ತಿನಲ್ಲಿ ವಯನಾಡ್ ಮತದಾರರ ಧ್ವನಿಯಾಗಿರುತ್ತೇನೆ. ಇದು ವಯನಾಡ್ ಕ್ಷೇತ್ರದ ಮತದಾರರ ಗೆಲುವು ಎಂಬುದನ್ನು ಬರುವ ದಿನಗಳಲ್ಲಿ ಖಂಡಿತವಾಗಿ ನಿರೂಪಿಸುತ್ತೇನೆಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನಾಯಕಿ
ಉಪಚುನಾವಣೆ ಗೆಲುವಿಗೆ ಡಬಲ್ ಎಂಜಿನ್ ಸರ್ಕಾರದ ನೀತಿ ಕಲ್ಯಾಣ ಕಾರ್ಯಕ್ರಮಗಳು ಉತ್ತಮ ಆಡಳಿತ ಭದ್ರತೆ ಕಾರಣಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಉತ್ತರ ಪ್ರದೇಶ
ಉಪಚುನಾವಣೆ ಫಲಿತಾಂಶ ಜನರಿಗಾಗಿ ಇನ್ನಷ್ಟು ಕೆಲಸ ಮಾಡುವ ಉತ್ಸಾಹ ನೀಡಿದೆ. ನಾವೆಲ್ಲರೂ ಸಾಮಾನ್ಯ ಜನರು. ಅದೇ ನಮ್ಮ ಗುರುತು. ನಾವು ಜಮೀನ್ದಾರರಲ್ಲ. ಜನರ ರಕ್ಷಕರುಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಪಶ್ಚಿಮ ಬಂಗಾಳ
ಉತ್ತರ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವನ್ನು ‘ಚುನಾವಣಾ ರಾಜಕಾರಣದ ಅತಿ ವಿಕೃತ ಸ್ವರೂಪ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬಣ್ಣಿಸಿದ್ದಾರೆ. ‘ಎಕ್ಸ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ಭ್ರಷ್ಟಾಚಾರದ ಜೊತೆಗೆ ಚುನಾವಣೆ ಸಮೀಕರಿಸುವವರ ತಂತ್ರಗಾರಿಕೆ ಛಾಯಾಚಿತ್ರಗಳಲ್ಲಿ ಮೊದಲೇ ದಾಖಲಾಗಿದ್ದು ಅವರ ಬಣ್ಣ ಬಯಲಾಗಿದೆ’ ಎಂದು ಟೀಕಿಸಿದ್ದಾರೆ. ‘ಜಗತ್ತು ರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯವು ಚುನಾವಣೆ ರಾಜಕಾರಣದ ಈ ವಿಕೃತ ಸ್ವರೂಪವನ್ನು ನೋಡಿದೆ. ಇದು ಸುಳ್ಳುಗಳ ಕಾಲವಿರಬಹುದು. ಆದರೆ ಸುಳ್ಳಿನ ಯುಗವಲ್ಲ’ ಎಂದು ಹೇಳಿದ್ದಾರೆ. ‘ಈಗ ನಿಜವಾದ ಸಂಘರ್ಷ ಆರಂಭವಾಗಿದೆ. ನಿಮ್ಮ ಮುಷ್ಟಿಯನ್ನು ಬಿಗಿ ಹಿಡಿಯಿರಿ ಮತ್ತು ನಾವು ಒಗ್ಗೂಡಿದರೆ ಗೆಲ್ಲುತ್ತೇವೆ ಎಂದು ಘೋಷಿಸಿ’ ಎಂದು ಸಲಹೆ ಮಾಡಿದ್ದಾರೆ.
ಕೇರಳದ ವಯನಾಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 4.1 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದು ಲೋಕಸಭೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಇವರ ಆಯ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ದನಿಗೆ ಇನ್ನಷ್ಟು ಬಲ ನೀಡಲಿದೆ ಎನ್ನಲಾಗಿದೆ. ತಾಯಿ ಸೋನಿಯಾಗಾಂಧಿ ಅಣ್ಣ ರಾಹುಲ್ ಸ್ಪರ್ಧಿಸಿದ್ದಾಗ ಹಿನ್ನೆಲೆಯಲ್ಲಿ ನಿಂತು ಗೆಲುವಿಗೆ ಶ್ರಮಿಸಿದ್ದ ಪ್ರಿಯಾಂಕಾ ಈಗ ಮುನ್ನೆಲೆಗೆ ಬಂದಿದ್ದಾರೆ. ಗೆಲುವಿನೊಂದಿಗೆ ಮೂಲಕ ಅಣ್ಣ–ತಂಗಿ ಒಟ್ಟಿಗೇ ಲೋಕಸಭೆಯಲ್ಲಿ ಅಸೀನರಾಗಲಿದ್ದಾರೆ. ತಾಯಿ ಸೋನಿಯಾ ಸದ್ಯ ಪ್ರಸ್ತುತ ರಾಜ್ಯಸಭೆ ಸದಸ್ಯೆ. ಏಕ ಕಾಲದಲ್ಲಿ ಒಂದೇ ಕುಟುಂಬದ ಮೂವರು ಸಂಸತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಬರೇಲಿ ವಯನಾಡ್ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ರಾಹುಲ್‌ಗಾಂಧಿ ಬಳಿಕ ವಯನಾಡ್ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಕ್ಷೇತ್ರದಿಂದ ಪ್ರಿಯಾಂಕಾ ಗೆದ್ದಿದ್ದಾರೆ. ಪ್ರಿಯಾಂಕಾ ಅವರು 410931 ಮತಗಳಿಂದ ಗೆಲುವು ಸಾಧಿಸಿದರು. ಪ್ರಿಯಾಂಕಾ 622338 ಮತ ಪಡೆದರೆ ಸಮೀಪದ ಅಭ್ಯರ್ಥಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ 211407 ಎನ್‌ಡಿಎಯ ನವ್ಯಾ ಹರಿದಾಸ್ 109939 ಮತ ಪಡೆದರು. ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಒಟ್ಟು 647445 ಮತ ಪಡೆದಿದ್ದು 364422 ಮತಗಳಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಪ್ರಿಯಾಂಕಾ ಅವರು ಗೆಲುವಿನ ಅಂತರವನ್ನು ಇನ್ನಷ್ಟು ಹಿಗ್ಗಿಸಿದ್ದಾರೆ. ‘ವಯನಾಡ್ ಕ್ಷೇತ್ರದ ಸೋದರ ಸೋದರಿಯರೇ ನಿಮ್ಮ ಬೆಂಬಲ ವಿಶ್ವಾಸದಿಂದ ಮನಸ್ಸು ತುಂಬಿ ಬಂದಿದೆ. ನಿಮ್ಮ ಕನಸು ಈಡೇರಿಸಲು ಹಕ್ಕುಗಳ ಸಾಕಾರಕ್ಕಾಗಿ ಹೋರಾಡಲಿದ್ದೇನೆ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ. ‘ಎಕ್ಸ್’ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ‘ನನ್ನ ಮಾರ್ಗದರ್ಶಕರಾಗಿ ಹಾಗೂ ಬೆನ್ನ ಹಿಂದೆ ನಿಂತು ಪ‍್ರೋತ್ಸಾಹಿಸಿದ ರಾಹುಲ್‌ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ. ‘ಯುಡಿಎಫ್‌ನ ನಾಯಕರು ಪ್ರಚಾರದಲ್ಲಿ ಅವಿರತ ತೊಡಗಿದ್ದ ಎಲ್ಲ ಕಾರ್ಯಕರ್ತರು ತಾಯಿ ಹಾಗೂ ಪತಿ ರಾಬರ್ಟ್ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರು ನೀಡಿದ ಸಹಕಾರ ಬೆಂಬಲಕ್ಕಾಗಿ ಕೃತಜ್ಞತೆಗಳು’ ಎಂದು ಹೇಳಿದ್ದಾರೆ.
ಲೋಕಸಭೆ: ರಾಜ್ಯ;ಒಟ್ಟುಸ್ಥಾನ;ಗೆದ್ದಪಕ್ಷ ಕೇರಳ;01;ಕಾಂಗ್ರೆಸ್ ಮಹಾರಾಷ್ಟ್ರ;01;ಬಿಜೆಪಿ ವಿಧಾನಸಭೆ ರಾಜ್ಯ;ಒಟ್ಟು ಸ್ಥಾನ;ಗೆದ್ದ ಪಕ್ಷಗಳು ಉತ್ತರಪ್ರದೇಶ;09;ಬಿಜೆಪಿ–6 ಎಸ್‌ಪಿ–01 ;ಆರ್‌ಎಲ್‌ಡಿ–01 ರಾಜಸ್ಥಾನ;07;ಬಿಜೆಪಿ–5 ಕಾಂಗ್ರೆಸ್–01 ಬಿಎಪಿ–01 ಪಶ್ಚಿಮ ಬಂಗಾಳ;06;ಟಿಎಂಸಿ–06 ಅಸ್ಸಾಂ;05;ಬಿಜೆಪಿ–03 ಯುಪಿಪಿಎಲ್–01 ಎಜಿಪಿ–01 ಬಿಹಾರ;04;ಬಿಜೆಪಿ–2 ಎಚ್‌ಎಎಂ–01 ಜೆಡಿಯು–01 ಪಂಜಾಬ್;04;ಎಎಪಿ–03 ಕಾಂಗ್ರೆಸ್–01 ಕರ್ನಾಟಕ;03;ಕಾಂಗ್ರೆಸ್–03 ಛತ್ತೀಸಗಢ;01;ಬಿಜೆಪಿ–1 ಗುಜರಾತ್;01;ಬಿಜೆಪಿ–01 ಕೇರಳ;02;ಕಾಂಗ್ರೆಸ್–01ಸಿಪಿಎಂ–01 ಮಧ್ಯಪ್ರದೇಶ;02;ಬಿಜೆಪಿ–01 ಕಾಂಗ್ರೆಸ್–01 ಮೇಘಾಲಯ;01;ಎನ್‌ಪಿಪಿ–01 ಸಿಕ್ಕಿಂ;02;ಎಸ್‌ಕೆಎಂ–02 ಉತ್ತರಾಖಂಡ;01;ಬಿಜೆಪಿ–01 ಒಟ್ಟು;48; ಎನ್‌ಡಿಎ –28 ‘ಇಂಡಿಯಾ’ –20
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.