ADVERTISEMENT

ರಾಜ್ಯಸಭೆಯ 6 ಸ್ಥಾನಗಳಿಗೆ ಡಿಸೆಂಬರ್ 20ರಂದು ಚುನಾವಣೆ

ಪಿಟಿಐ
Published 26 ನವೆಂಬರ್ 2024, 11:36 IST
Last Updated 26 ನವೆಂಬರ್ 2024, 11:36 IST
   

ನವದೆಹಲಿ: ಆಂಧ್ರಪ್ರದೇಶದ ಮೂರು ಸ್ಥಾನ ಸೇರಿ ಖಾಲಿ ಇರುವ ರಾಜ್ಯಸಭೆಯ 6 ಸ್ಥಾನಗಳಿಗೆ ಡಿಸೆಂಬರ್‌ 20ರಂದು ಚುನಾವಣೆ ನಡೆಯಲಿದೆ.

ತನ್ನ ಸಂಖ್ಯಾಬಲ ಹೆಚ್ಚಿಸಿಕೊಂಡು, ಆ ಮೂಲಕ ರಾಜ್ಯಸಭೆಯಲ್ಲಿ ಬಹುಮತಕ್ಕೆ ಬೇಕಿರುವ ಸ್ಥಾನಗಳ ಗಡಿ ದಾಟಲು ಆಡಳಿತಾರೂಢ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಚುನಾವಣೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಿಸಿಲ್ಲ. ಈ ಸ್ಥಾನಗಳು ಕಳೆದ ಮೂರು ವರ್ಷಗಳಿಂದ ಖಾಲಿ ಉಳಿದಿವೆ.

ADVERTISEMENT

ಆಂಧ್ರಪ್ರದೇಶದ ಮೂರು, ಒಡಿಶಾ ಹಾಗೂ ಹರಿಯಾಣದ ತಲಾ ಒಂದು ಸೇರಿದಂತೆ ಐದು ಸೀಟುಗಳನ್ನು ಎನ್‌ಡಿಎ ಗೆಲ್ಲುವ ನಿರೀಕ್ಷೆ ಇದೆ. ಒಡಿಶಾ ಮತ್ತು ಹರಿಯಾಣದಲ್ಲಿ ಬಿಜೆಪಿ ಸರ್ಕಾರಗಳು ಇರುವುದು ಹಾಗೂ ಆಂಧ್ರಪ್ರದೇಶಲ್ಲಿ ಎನ್‌ಡಿಎ ಸರ್ಕಾರ ಇರುವುದರಿಂದ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಸುಲಭವಾಗಲಿದೆ.

ಪಶ್ಚಿಮ ಬಂಗಾಳದ ಸ್ಥಾನವು ನಿರೀಕ್ಷೆಯಂತೆ ಆಡಳಿತಾರೂಢ ಟಿಎಂಸಿ ಪಾಲಾಗಲಿದೆ.

ವಿವಿಧ ಕಾರಣಗಳಿಂದಾಗಿ, ರಾಜ್ಯಸಭೆಯ ಆರು ಸದಸ್ಯರು ರಾಜೀನಾಮೆ ನೀಡಿದ್ದರಿಂದ ಈ ಸ್ಥಾನಗಳು ತೆರವಾಗಿದ್ದವು. ಮತ್ತೊಂದೆಡೆ, ಈ ಸ್ಥಾನಗಳು ತೆರವಾದ ಕಾರಣ ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಕೂಡ ಸಿಕ್ಕಿತ್ತು.

ರಾಜೀನಾಮೆ ಕೊಟ್ಟವರಾರು?:

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಪರಾಭವಗೊಂಡ ನಂತರ ಪಕ್ಷದ ರಾಜ್ಯಸಭಾ ಸದಸ್ಯರಾದ ವೆಂಕಟರಮಣ ರಾವ್‌, ಬಿ.ಮಸ್ತಾನ್‌ ರಾವ್‌ ಯಾದವ ಹಾಗೂ ಆರ್‌.ಕೃಷ್ಣಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಈ ಮೂವರು ಎನ್‌ಡಿಎ ಜೊತೆಗಿದ್ದಾರೆ.

ಒಡಿಶಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಡಿ ಸೋತ ನಂತರ, ಪಕ್ಷದ ಸಂಸದ ಸುಜೀತ್‌ ಕುಮಾರ್‌ ರಾಜ್ಯಸಭಾ ಸದಸ್ಯತ್ವ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರು ಬಿಜೆಪಿಯಲ್ಲಿದ್ದಾರೆ.

ಟಿಎಂಸಿಯ ಜವಾಹರ್‌ ಸರ್ಕಾರ ಇತ್ತೀಚೆಗೆ ರಾಜ್ಯಸಭಾ ಸದಸ್ಯತ್ವ ರಾಜೀನಾಮೆ ನೀಡುವ ಜೊತೆಗೆ ಪಕ್ಷವನ್ನೂ ತ್ಯಜಿಸಿದ್ದಾರೆ. 

ಆರ್‌.ಜಿ.ಕರ್ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಆಕೆಯ ಕೊಲೆ ಪ್ರಕರಣ ವಿಚಾರದಲ್ಲಿ ಟಿಎಂಸಿ ನಡೆಯಿಂದ ಅಸಮಾಧಾನಗೊಂಡು ಅವರು ಈ ತೀರ್ಮಾನ ತೆಗೆದುಕೊಂಡಿದ್ದರು.

ಇನ್ನು, ಕಿಶನ್‌ ಲಾಲ್ ಪನ್ವಾರ್ ಅವರು ಹರಿಯಾಣ ವಿಧಾನಸಭೆಗೆ ಆಯ್ಕೆಯಾದ ಕಾರಣ, ಅವರು ಪ್ರತಿನಿಧಿಸುತ್ತಿದ್ದ ರಾಜ್ಯಸಭಾ ಸ್ಥಾನ ತೆರವಾಗಿದೆ.

ಎನ್‌ಡಿಎ ಬಲ 120

ರಾಜ್ಯಸಭೆಯ ಒಟ್ಟು ಸಂಖ್ಯಾಬಲ 245 ಇದ್ದು ಬಹುಮತಕ್ಕೆ 123 ಸ್ಥಾನಗಳ ಅಗತ್ಯವಿದೆ. ಈ ಪೈಕಿ ಜಮ್ಮು–ಕಾಶ್ಮೀರದಲ್ಲಿ ನಾಲ್ಕು ಹಾಗೂ ನಾಮನಿರ್ದೇಶಿತ ಸ್ಥಾನಗಳ ಪೈಕಿ 4 ಸ್ಥಾನಗಳು ಖಾಲಿ ಇವೆ. ಎನ್‌ಡಿಎ ಸಂಖ್ಯಾಬಲ 120 ಇದ್ದು ಈ ಪೈಕಿ ಬಿಜೆಪಿ ಸದಸ್ಯರ ಸಂಖ್ಯೆ 95.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.