ADVERTISEMENT

ಬಿಜೆಪಿ ತಂಡ ಪುನಾರಚನೆ: ‘ರಾಷ್ಟ್ರೀಯ’ ಹುದ್ದೆಯಿಂದ ಸಿ.ಟಿ. ರವಿ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 15:28 IST
Last Updated 29 ಜುಲೈ 2023, 15:28 IST
ಸಿ.ಟಿ. ರವಿ
ಸಿ.ಟಿ. ರವಿ   

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಾಗೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಕೇಂದ್ರ ಪದಾಧಿಕಾರಿಗಳ ತಂಡವನ್ನು ಶನಿವಾರ ಪುನರ್ ರಚನೆ ಮಾಡಿದ್ದಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕರ್ನಾಟಕದ ಒಕ್ಕಲಿಗ ನಾಯಕ ಸಿ.ಟಿ.ರವಿ ಅವರನ್ನು ಕೈಬಿಡಲಾಗಿದೆ. ಕರ್ನಾಟಕದವರೇ ಆದ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರನ್ನು ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 65 ಸ್ಥಾನಗಳನ್ನು ಗಳಿಸಿ ಬಿಜೆಪಿ ಹೀನಾಯವಾಗಿ ಸೋತಿತ್ತು. ಚುನಾವಣೆ ಮುಗಿದು ಎರಡು ತಿಂಗಳುಗಳು ಕಳೆದರೂ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ವಿರೋಧ ಪಕ್ಷ ನಾಯಕರನ್ನು ಪಕ್ಷದ ಹೈಕಮಾಂಡ್ ನೇಮಕ ಮಾಡಿಲ್ಲ. ರವಿ ಅವರನ್ನು ‘ರಾಷ್ಟ್ರೀಯ’ ಹುದ್ದೆಯಿಂದ ಕೈ ಬಿಡುವ ಮೂಲಕ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರಿಗೆ ಮತ್ತೊಂದು ಸುತ್ತಿನ ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ಪದಾಧಿಕಾರಿಗಳ ಪಟ್ಟಿಯಲ್ಲಿ ಹೊಸದಾಗಿ ರಾಜ್ಯದ ಯಾವುದೇ ನಾಯಕರಿಗೆ ಸ್ಥಾನ ಸಿಕ್ಕಿಲ್ಲ. ಪಕ್ಷದ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ, ಸದಸ್ಯರಾಗಿ ಬಿ.ಎಸ್‌.ಯಡಿಯೂರಪ್ಪ ಮುಂದುವರಿಯಲಿದ್ದಾರೆ.

ADVERTISEMENT

ಬಿ.ಎಲ್‌.ಸಂತೋಷ್‌ ಅವರಿಗೆ ಪರಮಾಪ್ತರಾಗಿರುವ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ 2020ರಲ್ಲಿ ನೇಮಕ ಮಾಡಲಾಗಿತ್ತು. ಅವರಿಗೆ ಮಹಾರಾಷ್ಟ್ರ, ತಮಿಳುನಾಡು ಹಾಗೂ ಗೋವಾ ರಾಜ್ಯಗಳ ಉಸ್ತುವಾರಿ ವಹಿಸಲಾಗಿತ್ತು. ಅವರು ವಿಧಾನಸಭಾ ಚುನಾವಣೆಯಲ್ಲಿ (ಚಿಕ್ಕಮಗಳೂರು) ಸೋತಿದ್ದಾರೆ.

ಹೊಣೆಯಿಂದ ಕೈಬಿಟ್ಟ ಬೆನ್ನಲ್ಲೇ ರವಿ ಅವರು ಟ್ವೀಟ್‌ ಮಾಡಿ, ‘ಈ ಜವಾಬ್ದಾರಿ ನನಗೆ ಬಹಳಷ್ಟು ಅನುಭವ ಮತ್ತು ಬದುಕಿಗೆ ಹೊಸ ಆಯಾಮಗಳನ್ನು ನೀಡಿದೆ. ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದವರೆಗಿನ ನನ್ನ ಪಯಣದಲ್ಲಿ ನಿರಂತರವಾಗಿ ಕಾರ್ಯಕರ್ತನ ಭಾವದಲ್ಲಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಅದೇ ಭಾವದಿಂದ, ಪಕ್ಷ ನೀಡಿದ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾ ನಡೆಸುತ್ತೇನೆ’ ಎಂದು ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರ ಅಧಿಕಾರಾವಧಿ ಮುಗಿದು ಹಲವು ತಿಂಗಳು ಕಳೆದಿವೆ. ರಾಜ್ಯ ಘಟಕಕ್ಕೆ ಹೊಸ ಸಾರಥಿಯ ನೇಮಕಕ್ಕೆ ಹೈಕಮಾಂಡ್‌ ಕಸರತ್ತು ನಡೆಸುತ್ತಿದೆ. ಲಿಂಗಾಯತ ನಾಯಕರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದರೆ, ರಾಜ್ಯ ಘಟಕಕ್ಕೆ ಒಕ್ಕಲಿಗ ನಾಯಕರನ್ನು ಪರಿಗಣಿಸುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಸಿ.ಟಿ.ರವಿ ಪ್ರಬಲ ಆಕಾಂಕ್ಷಿ. ಜತೆಗೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಲ್ಲೇಶ್ವರ ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ, ಪದ್ಮನಾಭನಗರ ಶಾಸಕ ಆರ್.ಅಶೋಕ ಹೆಸರುಗಳೂ ಮುಂಚೂಣಿಯಲ್ಲಿವೆ. ಶೋಭಾ ಅಥವಾ ರವಿ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಲು ವರಿಷ್ಠರು ಒಲವು ಹೊಂದಿದ್ದಾರೆ. ಆದರೆ, ಶೋಭಾ ಅವರು ಸದ್ಯದ ಸನ್ನಿವೇಶದಲ್ಲಿ ರಾಜ್ಯ ರಾಜಕಾರಣಕ್ಕೆ ತೆರಳಲು ಹೆಚ್ಚು ಉತ್ಸುಕರಾಗಿಲ್ಲ ಎಂದು ಮೂಲಗಳು ಹೇಳಿವೆ.

ವಿಶ್ರಾಂತ ಕುಲಪತಿ ಉಪಾಧ್ಯಕ್ಷ: 9 ಪ್ರಧಾನ ಕಾರ್ಯದರ್ಶಿಗಳ ಪೈಕಿ, ರವಿ ಸೇರಿದಂತೆ ಇಬ್ಬರಿಗೆ ಕೊಕ್‌ ನೀಡಲಾಗಿದೆ. ಅಲೀಗಢ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ತಾರಿಕ್‌ ಮನ್ಸೂರ್‌ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರು ಅತೀ ಹಿಂದುಳಿದ (ಪಸ್ಮಾಂಡ) ಮುಸ್ಲಿಮ್‌ ಸಮುದಾಯದವರು. ಅವರು ವಿಧಾನ ಪರಿಷತ್‌ ಸದಸ್ಯರೂ ಹೌದು.

ಏಪ್ರಿಲ್‌ನಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಅನಿಲ್‌ ಆ್ಯಂಟನಿ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಅವರು ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಹಿರಿಯ ಕಾಂಗ್ರೆಸಿಗ ಎ.ಕೆ. ಆ್ಯಂಟನಿ ಅವರ ಪುತ್ರ. ತೆಲಂಗಾಣ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ‘ಬಡ್ತಿ’ ನೀಡಲಾಗಿದೆ.

ಅಸ್ಸಾಂನ ಸಂಸದ ದಿಲೀಪ್‌ ಸೈಕಿಯಾ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ. ಉಳಿದ 7 ನಾಯಕರು ಸ್ಥಾನ ಉಳಿಸಿಕೊಂಡಿದ್ದಾರೆ. ಉಪಾಧ್ಯಕ್ಷ ಹುದ್ದೆಯಿಂದ ಕೇಂದ್ರದ ಮಾಜಿ ಸಚಿವ ರಾಧಾಮೋಹನ್ ಸಿಂಗ್‌, ಕಾರ್ಯದರ್ಶಿ ಹುದ್ದೆಯಿಂದ ಉತ್ತರ ಪ್ರದೇಶದ ಸಂಸದರಾದ ವಿನೋದ್‌ ಸೋಂಕರ್‌, ಹರೀಶ್‌ ದ್ವಿವೇದಿ ಹಾಗೂ ಸುನಿಲ್ ದಿಯೋಡರ್‌ ಅವರಿಗೆ ಕೊಕ್‌ ನೀಡಲಾಗಿದೆ.

ಛತ್ತೀಸಗಢದ ರಾಜ್ಯಸಭಾ ಸದಸ್ಯ ಸರೋಜ್‌ ಪಾಂಡೆ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದ್ದು, ಪಶ್ಚಿಮ ಬಂಗಾಳದ ಸಂಸದ ದಿಲೀಪ್‌ ಘೋಷ್‌ ಅವರನ್ನು ಕೈಬಿಡಲಾಗಿದೆ. ಛತ್ತೀಸಗಢದ ಬುಡಕಟ್ಟು ನಾಯಕಿ ಲತಾ ಉಸೆಂಡಿ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಏರಿಸಲಾಗಿದೆ. ಕೆಲವೇ ತಿಂಗಳಲ್ಲಿ ನಡೆಯಲಿರುವ ಅಲ್ಲಿನ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಈ ನೇಮಕ ಮಾಡಲಾಗಿದೆ.

ನಡ್ಡಾ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಜತೆಗೆ ಶುಕ್ರವಾರ ಸುಮಾರು ನಾಲ್ಕು ಗಂಟೆ ಸುದೀರ್ಘ ಸಭೆ ನಡೆಸಿದ್ದರು. ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗೆ ಮುನ್ನ ಸಂಘಟನೆ ಬಲಪಡಿಸುವ ಕುರಿತು ಚರ್ಚಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.