ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನು ಮೂರು ದಿನಗಳಿರುವಂತೆಯೇ ‘ಸಿ–ವೋಟರ್’ ತನ್ನ ಸಮೀಕ್ಷೆ ಫಲಿತಾಂಶ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಇದೇ 10ರಂದು ಮೊದಲ ಹಂತದ ಮತದಾನ ನಡೆಯಲಿದೆ.
ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯು ಎರಡನೇ ಬಾರಿಗೆ ಗೆಲ್ಲಲಿದೆ. ಆದರೆ, ಅದರ ಸ್ಥಾನ ಗಳಿಕೆ ಭಾರಿ ಸಂಖ್ಯೆಯಲ್ಲಿ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಬಹುಮತದ ಅಂಚಿನಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಹಣಿ ಏರ್ಪಟ್ಟಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಆದರೆ, ಗೋವಾ ಮತ್ತೆ ಅತಂತ್ರವಾಗುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ಹೇಳಿದೆ.
ಅಂತಿಮ ಲೆಕ್ಕಾಚಾರದ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 225 ರಿಂದ 237 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಲಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿಕೂಟವು ಮೈತ್ರಿಕೂಟವು 139 ರಿಂದ 151 ಸ್ಥಾನಗಳನ್ನು ಗೆಲ್ಲಬಹುದು ಎನ್ನಲಾಗಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿ 13 ರಿಂದ 21 ಸ್ಥಾನಗಳನ್ನು ಗೆಲ್ಲಬಹುದು. ಆದರೆ, ಕಾಂಗ್ರೆಸ್ 4 ರಿಂದ 8 ಸ್ಥಾನಗಳನ್ನಷ್ಟೇ ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪಂಜಾಬ್‌ನಲ್ಲಿ ಏನಾಗಲಿದೆ?
ಪಂಜಾಬ್‌ನಲ್ಲಿ ಎಎಪಿ 55 ರಿಂದ 63 ಸ್ಥಾನಗಳ ನಡುವೆ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಹಾಗೇನಾದರೂ ಆದರೆ, ಪಂಜಾಬ್‌ನಲ್ಲಿ ಮೊದಲ ಬಾರಿಗೆ ಎಎಪಿ ಸರ್ಕಾರ ರಚನೆಯಾಗಲಿದೆ.
ಇನ್ನು ಕಾಂಗ್ರೆಸ್ ದಲಿತ ಮುಖ್ಯಮಂತ್ರಿ ಅಭ್ಯರ್ಥಿಯ ಹೊರತಾಗಿಯೂ 24 ರಿಂದ 30 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.