ನವದೆಹಲಿ: ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಯಾವುದೇ ಧರ್ಮದನಾಗರಿಕರಿಗೆ ತೊಂದರೆ ಇಲ್ಲ. ಭಾರತೀಯರು ಇದರ ಬಗ್ಗೆ ಆತಂಕಪಡುವುದು ಅನಗತ್ಯ. ಹೊರದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ, ಭಾರತವನ್ನು ಹೊರತುಪಡಿಸಿ ಇನ್ನೆಲ್ಲಿಗೂ ಹೋಗಲಾರದಂಥ ಪರಿಸ್ಥಿತಿಯಲ್ಲಿರುವ ವಿದೇಶಿಯರಿಗಷ್ಟೇ ಈ ಕಾಯ್ದೆ ಅನ್ವಯ,’ ಎಂದು ಪ್ರಧಾನಿ ನರೇಂದ್ರ ಮೋದಿಸ್ಪಷ್ಟಪಡಿಸಿದ್ದಾರೆ.
ಕಾಯ್ದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಗಳು ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕಾಯ್ದೆ ಬಗ್ಗೆ ಜನರಲ್ಲಿ ಇರಬಹುದಾದ ಅನುಮಾನ ನಿವಾರಿಸುವ ಪ್ರಯತ್ನ ಮಾಡಿದ್ದಾರೆ.
‘ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯು ದುರದೃಷ್ಟಕರ ಮತ್ತು ತೀವ್ರ ನೋವಿನ ಸಂಗತಿ. ವಾದ, ವಿವಾದ, ಚರ್ಚೆಗಳು ಪ್ರಜಾಪ್ರಭುತ್ವದ ಮೂಲಭೂತ ಲಕ್ಷಣ. ಆದರೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವುದು, ಜನಜೀವನ ಹಾಳು ಮಾಡುವುದು ನೈತಿಕವಲ್ಲ,’ ಎಂದು ಅವರು ಹೇಳಿದ್ದಾರೆ.
‘ಕಾಯ್ದೆಯು ಲೋಕಸಭೆಯ ಎರಡೂ ಮನೆಗಳಲ್ಲಿ ಅಭೂತಪೂರ್ವ ಬೆಂಬಲದೊಂದಿಗೆ ಅಂಗೀಕಾರಗೊಂಡಿದೆ. ಬಹುಪಾಲು ಪಕ್ಷಗಳು ಇದನ್ನು ಒಪ್ಪಿವೆ. ಎಲ್ಲವನ್ನೂ ಒಪ್ಪುವ ಭಾರತದ ಪುರಾತನ ಸಂಸ್ಕೃತಿಯನ್ನು, ಇಲ್ಲಿನ ಸಾಮರಸ್ಯ, ಈ ದೇಶದ ಭಾತೃತ್ವ ಮತ್ತು ಮಿಡಿಯುವ ಗುಣವನ್ನು ಈ ಕಾಯ್ದೆ ವಿವರಿಸುತ್ತದೆ,’ ಎಂದಿದ್ದಾರೆ.
‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಯಾವುದೇ ಧರ್ಮದನಾಗರಿಕರಿಗೆ ತೊಂದರೆ ಇಲ್ಲ. ಭಾರತೀಯರು ಇದರ ಬಗ್ಗೆ ಆತಂಕಪಡುವುದು ಅನಗತ್ಯ. ಹೊರದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ, ಭಾರತವನ್ನು ಹೊರತುಪಡಿಸಿ ಇನ್ನೆಲ್ಲಿಗೂ ಹೋಗಲಾರದಂಥ ಪರಿಸ್ಥಿತಿಯಲ್ಲಿರುವ ವಿದೇಶಿಯರಿಗಷ್ಟೇ ಈ ಕಾಯ್ದೆ ಅನ್ವಯ,’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ.
‘ನಾವೆಲ್ಲರೂ ಒಟ್ಟಾಗಿ ಭಾರತದ ಅಭಿವೃದ್ಧಿ ಮತ್ತು ಭಾರತದ ಬಡವರು, ದೀನ ದುರ್ಬಲರಿಗಾಗಿ ಕೆಲಸ ಮಾಡಬೇಕಿದೆ. ದೇಶವನ್ನು ವಿಭಜಿಸುವ, ಸಮಸ್ಯೆ ಸೃಷ್ಟಿಸುವ ಪಟ್ಟಭದ್ರ ಹಿತಾಸಕ್ತಿಗಳನ್ನು ನಾವು ತಡೆಯಬೇಕಿದೆ,’ಎಂದು ಅವರು ಸಲಹೆ ನೀಡಿದ್ದಾರೆ.
‘ದೇಶದ ಶಾಂತಿ, ಸಹಭಾಳ್ವೆ, ಭಾತೃತ್ವವನ್ನು ಕಾಪಾಡಬೇಕಾದ ಸಮಯವಿದು. ಜನತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಶಾಂತಿಯಿಂದ ಇರಬೇಕು ಎಂದು ನಾನು ಮನವಿ ಮಾಡುತ್ತೇನೆ,’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.