ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರ್ಕಾರವು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವುದರ ನಡುವೆಯೇ ವಿರೋಧವೂ ಹೆಚ್ಚುತ್ತಿದೆ. ಕೇರಳದ ಎಡರಂಗ ಸರ್ಕಾರವು ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ಗೆ ದೂರು ಕೊಟ್ಟಿರುವುದು ವಿರೋಧ ಮತ್ತು ಸಮರ್ಥನೆಗೆ ಹೊಸ ಆಯಾಮ ಕೊಟ್ಟಿದೆ. ಕೇರಳದಲ್ಲಿ ಇದು ರಾಜ್ಯಪಾಲ ಮತ್ತು ಸರ್ಕಾರದ ನಡುವೆ ಜಟಾಪಟಿಗೂ ಕಾರಣವಾಗಿದೆ. ಸಿಎಎಗೆ ರಾಜ್ಯಗಳು ವಿರೋಧ ವ್ಯಕ್ತಪಡಿಸುವುದು ಸಾಂವಿಧಾನಿಕವೇ ಎಂಬ ಪ್ರಶ್ನೆಯೂ ಚರ್ಚೆಯಾಗುತ್ತಿದೆ
ರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಸಂಬಂಧಿಸಿ ಕೇರಳ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವಣ ಸಂಘರ್ಷ ಮತ್ತೊಂದು ಮಜಲಿಗೆ ಹೋಗಿದೆ.
ಕಾನೂನಿನ ಉಲ್ಲಂಘನೆಗೆ ಅವಕಾಶ ಕೊಡುವುದಿಲ್ಲ, ಇಂತಹ ವಿಚಾರಗಳಲ್ಲಿ ಮೂಕಪ್ರೇಕ್ಷಕನಾಗಿ ಇರುವುದಿಲ್ಲ. ಸಂವಿಧಾನವನ್ನು ಎತ್ತಿ ಹಿಡಿಯಲೇಬೇಕು ಮತ್ತು ಇದೊಂದು ವೈಯಕ್ತಿಕ ಸಂಘರ್ಷ ಅಲ್ಲ ಎಂದು ಖಾನ್ ಹೇಳಿದ್ದಾರೆ. ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರವು ದೂರು ಸಲ್ಲಿಸಲು ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೊದಲು ತಮಗೆ ಮಾಹಿತಿ ನೀಡಿಲ್ಲ ಎಂದು ಖಾನ್ ಅವರು ಇತ್ತೀಚೆಗೆ ಹೇಳಿದ್ದರು. ಯಾವುದೇ ಆದೇಶ ಅಥವಾ ನಿರ್ಧಾರಕ್ಕೆ ಮೊದಲು ರಾಜ್ಯಪಾಲರಿಗೆ ತಿಳಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದಿದ್ದರು. ಸರ್ಕಾರದಿಂದ ವಿವರಣೆ ಕೇಳುವುದಾಗಿಯೂ ಹೇಳಿದ್ದರು.
ಕೇರಳ ಸಚಿವ ಸಂಪುಟದ ಸಭೆಯು ಸೋಮವಾರ ನಡೆಯಲಿದ್ದು, ರಾಜ್ಯಪಾಲರ ಜತೆಗಿನ ಸಂಘರ್ಷದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ ವಿಚಾರದಲ್ಲಿ ಸರ್ಕಾರವು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಕಾನೂನು ಸಚಿವ ಎ.ಕೆ. ಬಾಲನ್ ಅವರು ಹೇಳಿದ್ದಾರೆ. ಕಾನೂನು ಪರಿಣತರ ಸಲಹೆ ಪಡೆದ ಬಳಿಕವೇ ರಾಜ್ಯಪಾಲರಿಗೆ ಪ್ರತಿಕ್ರಿಯೆ ನೀಡಬಹುದು ಎಂದು ಮೂಲಗಳು ಹೇಳಿವೆ.
ಸದ್ಯವೇ ನಡೆಯಲಿರುವ ಅಧಿವೇಶನದಲ್ಲಿ ರಾಜ್ಯದ ನೀತಿಗಳ ಕುರಿತು ರಾಜ್ಯಪಾಲರು ಭಾಷಣ ಮಾಡಬೇಕಿದೆ. ಹಾಗಾಗಿ, ಈ ಸಂದರ್ಭದಲ್ಲಿ ರಾಜ್ಯಪಾಲರ ಜತೆಗೆ ಜಟಾಪಟಿಗೆ ಇಳಿಯಲು ಸರ್ಕಾರಕ್ಕೆ ಇಚ್ಛೆ ಇಲ್ಲ ಎಂದೂ ಹೇಳಲಾಗಿದೆ.
ಸಾಂವಿಧಾನಿಕ: ಕಾಂಗ್ರೆಸ್
ಕೇಂದ್ರದ ನಿರ್ಧಾರವನ್ನು ಒಪ್ಪದೇ ಇರಲು ರಾಜ್ಯಗಳಿಗೆ ಹಕ್ಕು ಇದೆ. ಈ ವಿಚಾರ ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೆ ‘ಅಸಾಂವಿಧಾನಿಕ ಕಾನೂನು’ ಅನ್ನು ಜಾರಿ ಮಾಡುವಂತೆ ಕೇಂದ್ರವು ಒತ್ತಡ ಹೇರುವಂತಿಲ್ಲ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.
ಸಿಎಎ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಹಾಗಾಗಿ, ಈ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ರಾಜ್ಯಗಳು ಹೇಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಶನಿವಾರ ಹೇಳಿದ್ದರು. ಅದಾದ ಬಳಿಕ, ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
‘ಭಾರತವು ರಾಜ್ಯಗಳ ಒಕ್ಕೂಟ ಎಂಬುದನ್ನು ಬಿಜೆಪಿ ಮತ್ತು ರಾಜ್ಯಪಾಲರು ಮರೆಯುವುದು ಬೇಡ. ಸಂಸದೀಯ ಪದ್ಧತಿಯ ಪ್ರಕಾರ, ಕೇಂದ್ರದ ನಿರ್ಧಾರವನ್ನು ರಾಜ್ಯಗಳು ಒಪ್ಪದೇ ಇರಬಹುದು ಮತ್ತು ಸಂವಿಧಾನದ 131ನೇ ವಿಧಿ ಅಡಿಯಲ್ಲಿ ಅದನ್ನು ಪ್ರಶ್ನಿಸುವ ಹಕ್ಕೂ ಇದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಕರ್ನಾಟಕ, ಬಿಹಾರ, ರಾಜಸ್ಥಾನ ಸೇರಿ ಹಲವು ರಾಜ್ಯಗಳು ಈ ಹಿಂದೆಯೂ ವಿವಿಧ ವಿಚಾರಗಳಲ್ಲಿ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ದೂರು ನೀಡಿವೆ ಎಂಬುದನ್ನು ಅವರು ನೆನಪಿಸಿದ್ದಾರೆ.
ಅಸಾಂವಿಧಾನಿಕ: ನಿರ್ಮಲಾ
ಸಿಎಎ ಜಾರಿ ಮಾಡುವುದಿಲ್ಲ ಎಂದು ಕೆಲವು ರಾಜ್ಯಗಳು ನಿರ್ಧರಿಸಿರುವುದು ಅಸಾಂವಿಧಾನಿಕ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಂಸತ್ತು ಅಂಗೀಕರಿಸಿದ ಕಾಯ್ದೆಯನ್ನು ಜಾರಿ ಮಾಡುವುದು ರಾಜ್ಯಗಳ ಹೊಣೆಗಾರಿಕೆ ಎಂದಿದ್ದಾರೆ.
ಸಿಎಎ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಒಂದರೊಡನೆ ಒಂದನ್ನು ತಳಕು ಹಾಕಬಾರದು. ಸಮಾಜದಲ್ಲಿ ಅಶಾಂತಿ ಉಂಟಾಗುವಂತಹ ಆರೋಪಗಳನ್ನು ಸಿಎಎ ವಿರೋಧಿಗಳು ಮಾಡಬಾರದು ಎಂದೂ ಅವರು ಕೋರಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಯ್ದ ಕೆಲವರಿಗಷ್ಟೇ ಪೌರತ್ವ ನೀಡುತ್ತದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಪಾಕಿಸ್ತಾನದ ಗಾಯಕ ಅದ್ನಾನ್ ಸಮಿ ಸೇರಿ ನೆರೆಯ ದೇಶಗಳ 3,900 ಜನರಿಗೆ ಕಳೆದ ಆರು ವರ್ಷಗಳಲ್ಲಿ ಪೌರತ್ವ ನೀಡಲಾಗಿದೆ ಎಂದಿದ್ದಾರೆ.
‘ಹೊದಿಕೆ ಒಯ್ದ ಪೊಲೀಸರು’
(ಲಖನೌ ವರದಿ): ಇಲ್ಲಿನ ಚಾರಿತ್ರಿಕ ಘಂಟಾಗರ್ (ಗಡಿಯಾರ ಗೋಪುರ) ಉದ್ಯಾನದಲ್ಲಿ ಸಿಎಎ ವಿರುದ್ಧ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಹೊದಿಕೆಗಳು ಮತ್ತು ಆಹಾರ ವಸ್ತುಗಳನ್ನು ಪೊಲೀಸರು ಹೊತ್ತೊಯ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿಭಟನಕಾರರು ಉದ್ಯಾನದಲ್ಲಿ ಟೆಂಟ್ ಹಾಕಲು ಪೊಲೀಸರು ಅವಕಾಶ ಕೊಟ್ಟಿಲ್ಲ. ಅಲ್ಲಿ ಇದ್ದವರಿಗೆ ಹೊದಿಕೆ ಮತ್ತು ಆಹಾರ ನೀಡಿದ ಕೆಲವರ ವಿರುದ್ಧ ಪ್ರಕರಣಗಳನ್ನೂ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ.
‘ಡಿಫೆನ್ಸ್ ಎಕ್ಸ್‌ಪೊ’ ಮತ್ತು ಗಣರಾಜ್ಯ ದಿನ ಕಾರ್ಯಕ್ರಮಗಳ ಕಾರಣಗಳಿಂದ ನಗರದಲ್ಲಿ ಭಾರಿ ಪ್ರತಿಭಟನೆ ಮತ್ತು ರ‍್ಯಾಲಿ ನಡೆಯದಂತೆ ನೋಡಿಕೊಳ್ಳಲು ಜಿಲ್ಲಾಡಳಿತವು ಪ್ರಯತ್ನಿಸುತ್ತಿದೆ. ಹಾಗಾಗಿ, 144ನೇ ಸೆಕ್ಷನ್ ಅಡಿಯಲ್ಲಿ ಪ್ರತಿಬಂಧಕಾಜ್ಞೆಯನ್ನೂ ಹೇರಲಾಗಿದೆ.
ಆರೋಪಗಳನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಆದರೆ, ಕಾನೂನು ಪ್ರಕ್ರಿಯೆಗಳ ಅನ್ವಯವೇ ಹೊದಿಕೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.