ನವದೆಹಲಿ: ವಿವಾದಾತ್ಮಕ ‘ಪೌರತ್ವ ತಿದ್ದುಪಡಿ ಕಾಯ್ದೆ’ಯು ಜಾರಿಗೆ ಬಂದಿದೆ ಎಂಬ ಘೋಷಣೆಯನ್ನು ಕೇಂದ್ರ ಸರ್ಕಾರವು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಾಡಿದೆ. ಯಾವುದೇ ದಾಖಲೆಗಳು ಇಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತ ಪ್ರವೇಶಿಸಿದ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ಈ ಕಾಯ್ದೆಯು ನೀಡುತ್ತದೆ.
ಪೌರತ್ವ ತಿದ್ದುಪಡಿ ಕಾಯ್ದೆ –2019ಕ್ಕೆ (ಸಿಎಎ) ಸಂಬಂಧಿಸಿದ ನಿಯಮಗಳನ್ನು ಕೇಂದ್ರವು ಸೋಮವಾರ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಈ ಮೂರು ದೇಶಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರವು ಇನ್ನು ಆರಂಭಿಸಲಿದೆ.
ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರು 2019ರ ಡಿಸೆಂಬರ್‌ನಲ್ಲಿ ಅಂಕಿತ ಹಾಕಿದ್ದರು. ಆದರೆ ಈ ಕಾನೂನು ವಿರೋಧಿಸಿ ದೇಶದ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಕಾಯ್ದೆಯು ತಾರತಮ್ಯದಿಂದ ಕೂಡಿದೆ ಎಂದು ಹಲವು ರಾಜಕೀಯ ಪಕ್ಷಗಳು ಆರೋಪಿಸಿದ್ದವು. ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಇದುವರೆಗೆ ಅಧಿಸೂಚನೆಯಲ್ಲಿ ಪ್ರಕಟಿಸಿರಲಿಲ್ಲ. ಹೀಗಾಗಿ ಕಾಯ್ದೆಯು ಜಾರಿಗೆ ಬಂದಿರಲಿಲ್ಲ.
‘ಪೌರತ್ವ (ತಿದ್ದುಪಡಿ) ನಿಯಮಗಳು–2024 ಹೆಸರಿನ ಈ ನಿಯಮಗಳು, ಸಿಎಎ–2019 ಕಾಯ್ದೆಯ ಪ್ರಕಾರ ಅರ್ಹರಾದವರಿಗೆ ಭಾರತೀಯ ಪೌರತ್ವ ನೀಡಲು ಅವಕಾಶ ಕಲ್ಪಿಸಲಿವೆ’ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.
ಪೌರತ್ವ ಕೋರುವ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಇದಕ್ಕಾಗಿ ಪ್ರತ್ಯೇಕ ವೆಬ್ ಪೋರ್ಟಲ್ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
‘ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಗುರಿಯಾದ ಅಲ್ಪಸಂಖ್ಯಾತರಿಗೆ ನಮ್ಮ ದೇಶದ ಪೌರತ್ವ ಪಡೆದುಕೊಳ್ಳಲು ಈ ನಿಯಮಗಳು ನೆರವಾಗಲಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಭಾರತದಲ್ಲಿ ಇರುವ ಪಾಕಿಸ್ತಾನದ ಹಿಂದೂ ನಿರಾಶ್ರಿತರು ಕೇಂದ್ರದ ನಡೆಯನ್ನು ಸ್ವಾಗತಿಸಿದ್ದಾರೆ. ಸಮುದಾಯದ ಸರಿಸುಮಾರು ಐದು ಸಾವಿರ ಮಂದಿ ಈಗ ಪೌರತ್ವ ಪಡೆಯಲಿದ್ದಾರೆ ಎಂದು ದೆಹಲಿಯಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ ಹಿಂದೂ ಕುಟುಂಬಗಳ ನಾಯಕ ಧರ್ಮವೀರ ಸೋಲಂಕಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಸದೀಯ ಕಾರ್ಯಗಳ ಕೈಪಿಡಿಯಲ್ಲಿ ಇರುವ ವಿವರಗಳ ಪ್ರಕಾರ, ರಾಷ್ಟ್ರಪತಿಯವರ ಅಂಕಿತ ದೊರೆತಿರುವ ಯಾವುದೇ ಕಾಯ್ದೆಗೆ ಅಂಕಿತ ದೊರೆತ ಆರು ತಿಂಗಳಲ್ಲಿ ನಿಯಮಗಳನ್ನು ರೂಪಿಸಬೇಕು. ಅದು ಸಾಧ್ಯವಾಗದಿದ್ದರೆ ಲೋಕಸಭೆ ಮತ್ತು ರಾಜ್ಯಸಭೆಯ ಅಧೀನ ಶಾಸನ ಸಮಿತಿಗಳಿಂದ ಸರ್ಕಾರವು ಹೆಚ್ಚಿನ ಕಾಲಾವಕಾಶ ಪಡೆದುಕೊಳ್ಳಬೇಕು. ಕೇಂದ್ರ ಗೃಹ ಸಚಿವಾಲಯವು 2020ರಿಂದಲೂ, ನಿಯಮ ರೂಪಿಸಲು ಸಂಸದೀಯ ಸಮಿತಿಯಿಂದ ಕಾಲಕಾಲಕ್ಕೆ ಹೆಚ್ಚುವರಿ ಕಾಲಾವಕಾಶ ಪಡೆದುಕೊಳ್ಳುತ್ತ ಬಂದಿದೆ.
ಪೌರತ್ವ ಕೋರುವವರಿಂದ ಯಾವ ದಾಖಲೆಗಳನ್ನೂ ಕೇಳುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸಿಎಎ ಈಗ ದೇಶದ ಕಾನೂನಾಗಿದೆ. ಅದು ಅನುಷ್ಠಾನಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಮಿತ್ ಶಾ ಅವರು 2023ರ ಡಿಸೆಂಬರ್ 27ರಂದು ಹೇಳಿದ್ದರು. ಸಿಎಎ ವಿಚಾರದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದರು. ಮಮತಾ ಅವರ ನೇತೃತ್ವದಲ್ಲಿ ಟಿಎಂಸಿ ಪಕ್ಷವು ಸಿಎಎ ಜಾರಿಗೆ ವಿರೋಧ ವ್ಯಕ್ತಪಡಿಸಿದೆ.
ಸಿಎಎ ಜಾರಿಗೆ ತರುವುದು ಬಿಜೆಪಿಯ ಬದ್ಧತೆಗಳಲ್ಲಿ ಒಂದು ಎಂದು ಕೂಡ ಶಾ ಹೇಳಿದ್ದರು.
ಸಿಎಎ ಜಾರಿಗೆ ತರಲಾಗುತ್ತದೆ ಎಂಬ ಆಶ್ವಾಸನೆಯು ಪಶ್ಚಿಮ ಬಂಗಾಳದಲ್ಲಿ ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರವಾಗಿತ್ತು. ಬಂಗಾಳದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಳ್ಳುವುದರ ಹಿಂದೆ ಸಿಎಎ ವಿಚಾರವಾಗಿ ನೀಡಿರುವ ಆಶ್ವಾಸನೆ ಕೂಡ ಕೆಲಸ ಮಾಡಿರಬಹುದು ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ.
ದೆಹಲಿಯ ಶಾಹೀನ್ ಬಾಗ್, ಜಾಮಿಯಾ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಹಾಗೂ ಹಿಂದೆ ಸಿಎಎ ವಿರೋಧಿ ಪ್ರತಿಭಟನೆಗಳು ನಡೆದ ವಿವಿಧ ರಾಜ್ಯಗಳಲ್ಲಿ ಸೋಮವಾರ ಭದ್ರತೆ ಹೆಚ್ಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.