ಠಾಕೂರ್‌ನಗರ (ಪ.ಬಂಗಾಳ): ಕೋವಿಡ್-19 ಲಸಿಕೆ ವಿತರಣೆ ಮುಗಿದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ರ‍್ಯಾಲಿಯಲ್ಲಿ ಪ್ರತಿಕ್ರಿಯಿಸಿರುವ ಅಮಿತ್ ಶಾ, ಬಂಗಾಳದಲ್ಲಿ ಮತುವಾ ಸಮುದಾಯ ಒಳಗೊಂಡಂತೆ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಗೆ ಕೋವಿಡ್-19 ಲಸಿಕೆ ವಿತರಣೆಯ ಬಳಿಕ ಚಾಲನೆ ನೀಡಲಿದ್ದೇವೆ ಎಂದು ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿರೋಧ ಪಕ್ಷಗಳು ಅಲ್ಪ ಸಂಖ್ಯಾತರನ್ನು ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಅಮಿತ್ ಶಾ, ಸಿಎಎ ದೇಶದ ಅಲ್ಪಸಂಖ್ಯಾತರ ಪೌರತ್ವ ಸ್ಥಾನಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
2018ರಲ್ಲಿ ನರೇಂದ್ರ ಮೋದಿ ಸರ್ಕಾರವು ಹೊಸ ಪೌರತ್ವ ಕಾನೂನನ್ನು ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಬಳಿಕ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಭರವಸೆಯನ್ನು ಈಡೇರಿಸಿದೆ ಎಂದು ಅಮಿತ್ ಶಾ ತಿಳಿಸಿದರು.
2020ರಲ್ಲಿ ದೇಶವು ಕೋವಿಡ್-19 ಪಿಡುಗಿಗೆ ತುತ್ತಾದ ಬಳಿಕ ಕೊರೊನಾ ವೈರಸ್ ಮಾನದಂಡವನ್ನು ಪಾಲಿಸಬೇಕಾಗಿತ್ತು ಎಂದು ಶಾ ವಿವರಿಸಿದರು.
ನಾವು ಸುಳ್ಳು ಭರವಸೆಯನ್ನು ನೀಡಿದ್ದೇವೆ ಎಂದು ಮಮತಾ ದೀದಿ ಆರೋಪಿಸಿದರು. ಅವರು ಸಿಎಎ ಕಾಯ್ದೆಯನ್ನು ವಿರೋಧಿಸಿದರು. ಅಲ್ಲದೆ ಎಂದಿಗೂ ಜಾರಿ ಮಾಡಲು ಅನುಮತಿಸುವುದಿಲ್ಲ ಎಂದು ಹೇಳಿದರು. ಬಿಜೆಪಿ ಯಾವತ್ತೂ ತಾನು ನೀಡುವ ಭರವಸೆಗಳನ್ನು ಈಡೇರಿಸುತ್ತದೆ. ನಿರಾಶ್ರಿತರಿಗೆ ಭಾರತದ ಪೌರತ್ವ ಸಿಗಲು ನಾವು ಈ ಕಾನೂನನ್ನು ಜಾರಿಗೆ ತಂದಿದ್ದೇವೆ. ಇದನ್ನು ಮಮತಾ ಅವರಿಂದ ತಡೆಯಲು ಸಾಧ್ಯವಿಲ್ಲ. ಅವರ ಆಡಳಿತ ಏಪ್ರಿಲ್ ವೇಳೆಗೆ ಕೊನೆಯಾಗಲಿದೆ ಎಂದು ಸವಾಲು ಹಾಕಿದರು.
ಮತುವಾ ಮೂಲತಃ ಪೂರ್ವ ಪಾಕಿಸ್ತಾನದವರಾಗಿದ್ದು, ದೇಶ ವಿಭಜನೆ ಹಾಗೂ ಬಾಂಗ್ಲಾದೇಶ ರಚನೆಯ ಸಂದರ್ಭದಲ್ಲಿ ಭಾರತಕ್ಕೆ ಬಂದಿರುವ ದುರ್ಬಲ ಹಿಂದೂ ವಿಭಾಗಕ್ಕೆ ಸೇರಿದವರಾಗಿದ್ದಾರೆ. ಅವರಲ್ಲಿ ಹಲವರಿಗೆ ಭಾರತೀಯ ಪೌರತ್ವ ನೀಡಿದರೂ ಇನ್ನೂ ಅನೇಕ ಸಂಖ್ಯೆಯ ಜನರಿಗೆ ಪೌರತ್ವ ದೊರಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.