ನವದೆಹಲಿ/ಕೋಲ್ಕತ್ತ : ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಈಶಾನ್ಯ ರಾಜ್ಯಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ. ಆದರೆ, ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ ಭಾನುವಾರ ಹಿಂಸಾಚಾರ ನಡೆದಿದೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ ವಿದ್ಯಾರ್ಥಿಗಳು ಪೊಲೀಸರ ಜತೆ ಘರ್ಷಣೆಗೆ ಇಳಿದರು. ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ‘ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ನಮ್ಮ ಮೇಲೆ ಪೊಲೀಸರು ಲಾಠಿ ಬೀಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸಿಟ್ಟಿಗೆದ್ದ ಕೆಲವರು ಹಿಂಸಾಚಾರಕ್ಕೆ ಇಳಿದರು’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಸ್ಥಳಕ್ಕೆ ಧಾವಿಸಿದ ನಾಲ್ಕು ಅಗ್ನಿಶಾಮಕ ವಾಹನಗಳ ಮೇಲೂ ವಿದ್ಯಾರ್ಥಿಗಳು ದಾಳಿ ನಡೆಸಿದರು. ಈ ವೇಳೆ ಒಂದು ವಾಹನಕ್ಕೆ ಭಾರಿ ಪ್ರಮಾಣದ ಹಾನಿಯಾಗಿದೆ. ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಹಿಂಸಾಚಾರಕ್ಕೂ ನಮಗೂ ಸಂಬಂಧವಿಲ್ಲ. ಸ್ಥಳೀಯ ಕೆಲವುಕಿಡಿಗೇಡಿಗಳು ಪರಿಸ್ಥಿತಿ ಹದಗೆಡಿಸಿದ್ದಾರೆ. ಗಲಭೆ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳೆಲ್ಲರೂ ಕ್ಯಾಂಪಸ್‌ಗೆ ಮರಳಿದ್ದರು’ ಎಂದು ಜಾಮಿಯಾ ಮಿಲಿಯಾ ವಿದ್ಯಾರ್ಥಿ ಸಂಘಟನೆ ಹೇಳಿದೆ.
ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ. ಯಾರೂ ಆತಂಕ ಪಡಬೇಕಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು
-ಪಾರ್ಥ ಚಟರ್ಜಿ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ
ಹಿಂಸಾಚಾರದಲ್ಲಿ ವಿರೋಧಪಕ್ಷಗಳ ಕೈವಾಡವಿದೆ. ಬೆಂಕಿ ಹಚ್ಚುತ್ತಿರುವವರು ಯಾರು ಎಂಬುದನ್ನು ಅವರ ಉಡುಪಿನಿಂದ ಪತ್ತೆ ಮಾಡಬಹುದಾಗಿದೆ
-ನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.